ಪುತ್ತೂರು: ರಾಜ್ಯ ಸರಕಾರ ಬೆಳೆ ಹಾನಿ ಹಾಗೂ ಅಡಿಕೆ ಮರೆ ಹಾನಿ ಬಗ್ಗೆ ಯಾವುದೇ ಪರಿಹಾರ ನೀಡಿಲ್ಲ. ಈ ಮೂಲಕ ಪ್ರಾಕೃತಿಕ ವಿಕೋಪವನ್ನು ಕಡೆಗಣಿಸುವ ಜೊತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಸಂಪೂರ್ಣ ಕಡೆಗಣಿಸುವ ಮೂಲಕ ರೈತ ವಿರೋಧ ನೀತಿಯನ್ನು ಪಾಲಿಸುತ್ತಿದೆ. ರಾಜ್ಯ ಸರಕಾರದಿಂದ ಪರಿಹಾರ ದೊರೆಯದಿದ್ದರೆ ವಿಮೆಯಾದರೂ ಬರಬಹುದು ಎಂದು ಕಾಯುತ್ತಿದ್ದ ಸಂದರ್ಭದಲ್ಲಿ ವಿಮಾ ಕಂಪೆನಿ ಮತ್ತು ಸರಕಾರ ವಂಚನೆ ಮಾಡಿದೆ. ಈ ಕುರಿತು ಸರಕಾರ ವಿಮಾ ಕಂಪೆನಿಯ ಲೋಪವನ್ನು ಸರಿಪಡಿಸಿ ರೈತರಿಗೆ ವಿಮಾ ಕಂತು ಪಾವತಿಸಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ಹೋರಾಟ ಅನಿವಾರ್ಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆಯ ವಿಮಾ ಕಂತನ್ನು ಜುಲೈ 2024ಕ್ಕೆ ಅಂತಿಮಗೊಳಿಸಿ ದ.ಕ.ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ರೈತರು ಪಾವತಿ ಮಾಡಿದ್ದಾರೆ. ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಡಿಕೆ ಕಾಳುಮೆಣಸು ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹವಾಮಾನ ವೈಪರೀತ್ಯದಿಂದ ನಷ್ಟ ಉಂಟಾದಲ್ಲಿ ನಿಯಮಾನುಸಾರ ಬೆಳೆ ನಷ್ಟ ಪರಿಹಾರವನ್ನು ಪಡೆಯಲು ಅವಕಾಶಗಳನ್ನು ಕಲ್ಪಿಸುತ್ತದೆ. ಕೃಷಿಕ ಪ್ರತೀ ಹೆಕ್ಟೇರಿಗೆ ರೂ 6400 ಅಡಿಕೆಗೆ ವಿಮಾ ಕಂತು ಪಾವತಿಸಿದರೆ ಅವನಿಗೆ ಬೆಳೆ ಹಾನಿಯಾದರೆ ಗರಿಷ್ಟ ರೂ 1.28 ಲಕ್ಷ ವಿಮಾ ಪರಿಹಾರ ನೀಡಬೇಕು. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಶೇ.5 ರೈತ ಶೇ. 10 ಕೇಂದ್ರ ಸರಕಾರ ಶೇ. 10 ರಾಜ್ಯ ಸರಕಾರ ವಿಮಾ ಕಂತನ್ನು ವಿಮಾ ಸಂಸ್ಥೆಗೆ ನಿಗದಿ ಪಡಿಸಿದ ದಿನಾಂಕದಂದು ಕಟ್ಟಬೇಕು.
ಅಲಿಕಲ್ಲು ಮಳೆ (ಜನವರಿಯಿಂದ ಜೂನ್ 2025) ಮೇಘಸ್ಪೋಟನ (ಜುಲೈ ಅಕ್ಟೋಬರ್ 2024) ಎಲ್ಲಿಯಾದರು ಆದರೆ ಈ ಕುರಿತು 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಯಾ ಹಣಕಾಸಿನ ಸಂಸ್ಥೆಗೆ ಲಿಖಿತ ವರದಿ ಕೊಡಬೇಕು. ಇಂತಹ ಸಂದರ್ಭದಲ್ಲಿ ವ್ಯಕ್ತಿಗತ ಪರಿಹಾರ ನೀಡಬಹುದು ಅದನ್ನು ಹೊರತುಪಡಿಸಿ ಜಿಲ್ಲಾ ಸಮಿತಿ ಹಾಗೂ ಸರಕಾರಗಳು ಅನುಮೋದಿಸಿದ ಟರ್ಮ ಶೀಟ್ ಗಳನ್ನು ಪರಿಗಣಿಸಿ ನಷ್ಟ ಪರಿಹಾರ ನೀಡಲಾಗುವುದು. 2016ರಿಂದ ಆರಂಭವಾದ ಈ ಯೋಜನೆ ರೈತರಿಗೆ ಈವರೆಗೆ ವರದಾನವಾಗಿತ್ತು. ಆದರೆ ಈ ವರ್ಷ ಕುಂಭದ್ರೋಣ ಮಳೆ ಬಂದು ಪ್ರಾಕೃತಿಕ ವಿಕೋಪ ಅಡಿಕೆಗೆ ಮಾರಕವಾದ ಕೊಳೆರೋಗ, ಎಲೆ ಚುಕ್ಕೆ ರೋಗ, ಹಳದಿ ರೋಗ ಮರವೇ ಪೂರ್ತಿ ಸಾಯುವ ಹಂತಕ್ಕೆ ಬಂದಿದ್ದು ಸರಕಾರ ನಿಗದಿಪಡಿಸಿದ ಮಾನದಂಡದಡಿಯಲ್ಲಿ ರೈತನಿಗೆ ಈ ಕೃಷಿ ಹಂಗಾಮಿನಲ್ಲಿ ವಿಮಾ ಪರಿಹಾರ ಮೊತ್ತ ಲಭಿಸಬೇಕಿತ್ತು. ಆದರೆ ಇವತ್ತು ರೈತ ಪಾವತಿಸಿದ ವಿಮಾ ಕಂತೂ ಕೂಡ ಅವನ ಕೈಗೆ ಬರಲಿಲ್ಲ. ಒಂದು ಎಕರೆ ಅಡಿಕೆ ತೋಟಕ್ಕೆ 5 % ಹಾಗೆ ರೂ. 2590 ಕೇಂದ್ರ ಸರಕಾರ 10 % 5,180, ರಾಜ್ಯ ಸರಕಾರ ಶೇ 20 ರೂ. 10,360. ಒಟ್ಟು ರೂ. 18,130 ಪ್ರೀಮಿಯಂ ಮೊತ್ತಕ್ಕೆ ಗರಿಷ್ಟ ರೂ. 51,801 ವಿಮೆ ಬಿಡುಗಡೆಗೊಳಿಸಬಹುದು. ವಿಮಾ ಕಂಪೆನಿ ಪುತ್ತೂರು ತಾಲೂಕಿನ ಒಂದು ಗ್ರಾಮದಲ್ಲಿ ಬಿಡುಗಡೆಗೊಳಿಸಿದ ಮೊತ್ತ ರೂ. 12,398 ಅಂದರೆ ವಿಮಾ ಪ್ರೀಮಿಯಂ ಮೊತ್ತ ಕೂಡಾ ಸಿಕ್ಕಿಲ್ಲ ಎಂದವರು ಹೇಳಿದರು.
ಗ್ರಾ.ಪಂ ಯಾವುದೆ ಮಾಪನವಿಲ್ಲ:
ವಿಮಾ ಪರಿಹಾರ ಮೊತ್ತ ನೀಡಲು ಪಂಚಾಯತ್ ಮಟ್ಟದ ಮಳೆ ಮಾಪಕ ಮತ್ತು ಹವಾಮಾನ ಮಾಪನ ಕೇಂದ್ರಗಳ ಮುಖಾಂತರ ದಾಖಲಿಸಲಾದ ಹವಾಮಾನ ಅಂಶಗಳ ಮಾಹಿತಿಯ ಆಧಾರದಲ್ಲಿ ಬೆಳೆವಿಮೆ ನಷ್ಟವನ್ನು ಇತ್ಯರ್ಥ ಪಡಿಸಲಾಗುತ್ತದೆ. ಆದರೆ ಗ್ರಾಮಗಳಲ್ಲಿ ಈ ಯಾವುದೇ ಮಾಪನಗಳಿಲ್ಲ. ಪಕ್ಕದ ಪಂಚಾಯತ್ ಗಳಲ್ಲಿ ಕೂಡಾ ಮಾಪಕ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವ ಮಾನದಂಡ ಸರಕಾರ ಅನುಸರಿಸುತ್ತದೆ. ಇವತ್ತು ಪ್ರಾಕೃತಿಕ ಹಾನಿಯಿಂದ ಬೆಳೆ ನಷ್ಟ ಅನುಭವಿಸಿದ ರೈತನಿಗೆ ವಿಮಾ ಕಂಪೆನಿ ಮತ್ತು ಸರಕಾರ ವಂಚನೆ ಮಾಡುತ್ತಾ ಇದೆ. ಟರ್ಮ್ ಶೀಟ್ ಪ್ರಕಾರ ರೈತನಿಗೆ ಈ ಹಂಗಾಮಿನಲ್ಲಿ ಆದ ನಷ್ಟಕಳೆದ ಐದಾರು ವರ್ಷಗಳಲ್ಲಿ ಆಗಿಲ್ಲ ಆದರೂ ವಿಮಾ ಕಂಪೆನಿ ಬಿಡಿಗಾಸು ಕೊಟ್ಟು ಕೈ ಚೆಲ್ಲಿ ಕೂತಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಬೀದಿಗಿಳಿದು ಹೋರಾಟ – ಎಚ್ಚರಿಕೆ:
ರಾಜ್ಯ ಸರಕಾರದ ಬೆಳೆ ಹಾನಿ ಹಾಗೂ ಅಡಿಕೆ ಮರ ಹಾನಿ ಬಗ್ಗೆ ಯಾವುದೇ ಪರಿಹಾರ ನೀಡದೆ ಈ ವರ್ಷದ ಪ್ರಾಕೃತಿಕ ವಿಕೋಪವನ್ನು ಕಡೆಗಣಿಸುವ ಜೊತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಸಂಪೂರ್ಣ ಕಡೆಗಣಿಸುವ ಮೂಲಕ ರೈತ ವಿರೋಧ ನೀತಿಯನ್ನು ಪಾಲಿಸುತ್ತಿದೆ. ರೈತ ಸರಕಾರದಿಂದ ಪರಿಹಾರ ದೊರೆಯದಿದ್ದರೆ ವಿಮೆಯಾದರು ಬರಬಹುದು ಎಂದು ಕಾಯುತ್ತಿದ್ದ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳಿಗೆ ಸಾಲ ಪಡೆದ ರೈತ ಮತ್ತೆ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲದಾಗಿದೆ. ಹಾಗಾಗಿ ಸಹಕಾರ ಸಂಘಗಳು ರೈತರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿದೆ. ಸರಕಾರ ಮತ್ತು ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ವಿಮಾ ಕಂಪೆನಿಯವರನ್ನು ಕರೆಸಿ ಅಲ್ಲಿ ಆದ ಲೋಪಗಳನ್ನು ಸರಿಪಡಿಸಿ ರೈತರಿಗೆ ಸರಿಯಾದ ವಿಮಾ ಮೊತ್ತವನ್ನು ನೀಡಬೇಕು. ಅದಕ್ಕೆ ಇನ್ನು ಕಾಲಾವಕಾಶ ತೆಗೆದುಕೊಳ್ಳಬಾರದು. ಇಲ್ಲವಾದಲ್ಲಿ ರೈತ ಹೋರಾಟಕ್ಕೆ ನಿಲ್ಲುವ ಸಂದರ್ಭ ಬರಬಹುದು. ಒಂದುವಾರ ಕಾಲಾವಕಾಶ ನಾವು ನೀಡುತ್ತೇವೆ. ನಾವು ಕೂಡಾ ರೈತರ ಜೊತೆ ಬೀದಿಗಿಳಿದು ಹೋರಾಟಕ್ಕೆ ಬದ್ದರಾಗಿದ್ದೇವೆ ಎಂದು ಸಂಜೀವ ಮಠಂದೂರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಮಚ್ಚಿಮಲೆ, ಪುರುಷೋತ್ತಮ ಮುಂಗ್ಲಿಮನೆ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಕೃಷ್ಣಕುಮಾರ್ ರೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.






















