tamanvi
ಟ್ರೆಂಡಿಂಗ್ ನ್ಯೂಸ್

ಮಳೆಗಾಲದಲ್ಲಿ ನೆಮ್ಮದಿಯಿಂದ ನಿದ್ರಿಸಬಹುದು; ನಿದ್ರಿಸಿ ನಮ್ಮನ್ನು ಮರೆಯದಿರಿ | ವೃಥಾ ಖರ್ಚು ಬೇಡ – ಸಣ್ಣದೊಂದು ಹೂ ನೀಡಿದರೂ ಸಾಕು | ಕೊಲ್ಯದಲ್ಲಿ 2 ಕೋಟಿ ರೂ.ಗಳ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ಅಶೋಕ್ ರೈ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಚುನಾವಣೆ ಗೆದ್ದ ದಿನವೇ ನನ್ನ ಹೃದಯದಲ್ಲಿ ಬರೆದಿದ್ದೆ. ಕೊಲ್ಯ ನಿವಾಸಿಗಳ ಬಹುಬೇಡಿಕೆಯ ತಡೆಗೋಡೆ ನಿರ್ಮಾಣ ಆಗಬೇಕೆಂದು. ಮುಂದಿನ ನಾಲ್ಕು ತಿಂಗಳಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣ ಆಗಲಿದೆ. ಮಳೆಗಾಲದಲ್ಲಿಯೂ ನೀವು ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಆರ್ಯಾಪು ಗ್ರಾಮದ ಕೊಲ್ಯ ನಿವಾಸಿಗಳ ಬಹುಬೇಡಿಕೆಯ ತಡೆಗೋಡೆಗೆ ಶನಿವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮಳೆಗಾಲ ಬಂದರೆ ಕಾಮಗಾರಿ ಅಸಾಧ್ಯ. ಆದ್ದರಿಂದ ನಾಲ್ಕು ತಿಂಗಳ ಒಳಗೆ ಕಾಮಗಾರಿ ಆಗಬೇಕು. ತಪ್ಪಿದರೆ ನನಗೆ ತಿಳಿಸಿ. ಚುನಾವಣೆಯ ಸಂದರ್ಭ ಇಲ್ಲಿಗೆ ಬಂದಿದ್ದೆ. ಜನರ ಸಮಸ್ಯೆ ಆಲಿಸಿದ್ದೆ. ಒಂದು ಮನೆಯ ಬದಿಯಲ್ಲಂತೂ ಮಳೆ ನೀರು ಬರುವುದನ್ನು ನೋಡಿದರೆ, ಮನೆ ಬಿದ್ದು ಹೋಗುವ ಪರಿಸ್ಥಿತಿ ಇತ್ತು ಎಂದು ನೆನಪಿಸಿಕೊಂಡರು.

ಇನ್ನು ಒಂದೂವರೆ ವರ್ಷ ಕಾದು ನೋಡಿ. ಮಹಾಲಿಂಗೇಶ್ವರ ದೇವಸ್ಥಾನವನ್ನು ಮಾದರಿಯಾಗಿ ಮಾಡುತ್ತೇನೆ. ಹಿಂದುತ್ವ ಎಂದರೆ ಏನು ಎಂದು ತೋರಿಸುತ್ತೇನೆ. ಸುಮ್ಮನೆ ಬಂದು ಭಾಷಣ ಮಾಡಿ ಹೋಗುವವರಂತೆ ನಾನಲ್ಲ. ಒಮ್ಮೆ ಕೆಲಸ ಮಾಡಬೇಕೆಂದು ಮನಸ್ಸಿಗೆ ಬಂದರೆ ಸಾಕು, ಅದನ್ನು ಬಿಡದೆ ಸಾಧಿಸುವತ್ತ ಗಮನ ಹರಿಸುತ್ತೇನೆ. ಚುನಾವಣೆಯಲ್ಲಿ ಇಲ್ಲಿನ ಎಷ್ಟು ಜನ ಮತ ನೀಡಿದ್ದಾರೆಂದು ಗೊತ್ತಿಲ್ಲ. ಆದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕೆಂದು ಆವತ್ತೆ ನಿರ್ಧರಿಸಿದ್ದೆ ಎಂದರು.

ಬಿರುಮಲೆ ಗುಡ್ಡ, ಆರ್.ಟಿ.ಓ ಟ್ರ್ಯಾಕ್, ಮಹಾಲಿಂಗೇಶ್ವರ ದೇವಸ್ಥಾನ ಹೀಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ನಿಮ್ಮ ಬೇಡಿಕೆಗಳಿದ್ದರೆ ದಯವಿಟ್ಟು ಸೋಮವಾರ ನನ್ನ ಕಚೇರಿಗೆ ಬನ್ನಿ. ಯಾರು ಕೂಡ ಮನೆ, ವಿದ್ಯುತ್, ನೀರು ಇಲ್ಲದೇ ಇರಬಾರದು. ಅರ್ಜಿ ನೀಡಿ. ಸರಕಾರದ ಸವಲತ್ತು ತೆಗೆಸಿ ಕೊಡುವ ಜವಾಬ್ದಾರಿ ನನ್ನದು. ಇಷ್ಟೆಲ್ಲಾ ತಂದರು ನಾನು ನಿಮ್ಮ ಮತ ಬಿಟ್ಟು ಬೇರೆನೂ ಕೇಳುವುದಿಲ್ಲ ಎಂದರು.

ಆರ್ಯಾಪು ಗ್ರಾಮಕ್ಕೆ 5.34 ಕೋಟಿ ರೂ. ಅನುದಾನ ಬಂದಿದೆ. ಇದರಲ್ಲಿ 2 ಕೋಟಿ ರೂ. ಕೊಲ್ಯದ ತಡೆಗೋಡೆಗೆ. ಇದು ಸಾಕಾಗದೇ ಇದ್ದರೆ, ಕಾಮಗಾರಿ ಮುಗಿದ ಬಳಿಕ ಇನ್ನೊಂದು ಕೋಟಿ ರೂ. ನೀಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ವೃಥಾ ಖರ್ಚು ಬೇಡ:

ಶಾಸಕರನ್ನು ಗೌರವಿಸುವ ವೇಳೆ ಶಾಲು ಹೊದಿಸಿ ಸನ್ಮಾನಕ್ಕೆ ಮುಂದಾದರು. ಇದನ್ನು ನಯವಾಗಿಯೇ ಆಕ್ಷೇಪಿಸಿದ ಶಾಸಕರು, ಹೀಗೆಲ್ಲಾ ಸುಮ್ಮನೆ ಖರ್ಚು ಮಾಡಬೇಡಿ. ನಿಮ್ಮ ಪ್ರೀತಿಗಾಗಿ ಒಂದು ಸಣ್ಣ ಹೂ ನೀಡಿದರೆ ಸಾಕು ಎಂದರು. ಆದರೆ ಸ್ಥಳೀಯರ ಒತ್ತಾಯದಿಂದ ಶಾಲು ಹೊದಿಸಲಾಯಿತು ಗೌರವಿಸಲಾಯಿತು.

ಬಿಜೆಪಿ ಸತ್ತು ಹೋಗಿದೆ: ಕಾವು ಹೇಮನಾಥ ಶೆಟ್ಟಿ

ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು ಅಶೋಕ್ ಕುಮಾರ್ ರೈ. ಎಲ್ಲಾ ಕೆಲಸಗಳಲ್ಲಿ ಭಾಗಿಯಾಗಿ ಸಮಾಜಮುಖಿ ಚಿಂತನೆಯ ಕೆಲಸಗಳನ್ನು ಮಾಡುತ್ತಿದ್ದಾರೆ. 2.9 ಕೋಟಿ ರೂ.ಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಇದರ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಹೆಮ್ಮೆಪಟ್ಟಿದ್ದಾರೆ. ಪುತ್ತೂರಿನಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳನ್ನು ನಡೆಸುತ್ತಿದ್ದಾರೆ ಎಂದ ಅವರು, ಕೊಲ್ಯ ನಿವಾಸಿಗಳು ತಡೆಗೋಡೆಯ ಬೇಡಿಕೆ ಮುಂದಿಟ್ಟಿದ್ದರು. ಆದರೆ ಇಷ್ಟೊಂದು ದೊಡ್ಡ ಅನುದಾನ ಬರುತ್ತದೆ ಎಂದು ಕನಸಿನಲ್ಲಿಯೂ ನೆನೆಸಿರಲಿಕ್ಕಿಲ್ಲ. 2 ಕೋಟಿ ರೂ.ನಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಾಣ ಆಗಲಿದೆ. ಇದಕ್ಕೆ ಕಾರಣರಾದ ಶಾಸಕರನ್ನು ನಾವು ಉಳಿಸಿಕೊಳ್ಳಬೇಕು. ಅಶೋಕ್ ಕುಮಾರ್ ರೈ ಅವರು ಮುಂದೆಯೂ ಶಾಸಕರಾಗಿ ಬರಬೇಕು. ಇವರನ್ನು ಮಂತ್ರಿಯಾಗಿ ಮಾಡಬೇಕು ಎಂದು ಡಿಕೆ ಶಿವಕುಮಾರ್ ಅವರ ಮುಂದೆಯೂ ಬೇಡಿಕೆ ಇಟ್ಟಿದ್ದೇವೆ ಎಂದರು.

ಬಿಜೆಪಿ ಸತ್ತು ಹೋಗಿದೆ. ಗತಿಗೋತ್ರ ಇಲ್ಲದಂತಹ ಹೇಳಿಕೆ ನೀಡುತ್ತಿದ್ದಾರೆ. ಪುತ್ತೂರು ಬಿಜೆಪಿಯ ಭದ್ರಕೋಟೆಯಾಗಿತ್ತು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರ ಮುಂದೆ ಏನೂ ಇಲ್ಲದಂತಾಗಿ, ಕೈಕಾಲು ಬಿಟ್ಟಿದ್ದಾರೆ. ಅಶೋಕ್ ಕುಮಾರ್ ರೈ ಸಚಿವರಾದರೆ ಜಿಲ್ಲೆಯಿಂದಲೇ ಬಿಜೆಪಿ ತೊಲಗಲಿದೆ ಎಂದರು.

ಚುನಾವಣೆ ಸಂದರ್ಭ ಜನ ಸೇರಿಸಲು ಕಷ್ಟಪಟ್ಟಿದ್ದೆ: ಯೋಗೀಶ್ ಸಾಮಾನಿ

ಕೋಡಿಂಬಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರೈ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕಾರಿಣಿ ಸಮಿತಿ ಸದಸ್ಯ ಯೋಗೀಶ್ ಸಾಮಾನಿ ಕೋಡಿಂಬಾಡಿ ಮಾತನಾಡಿ, ನನ್ನ ಅತ್ತೆಯ ಮನೆ ಇಲ್ಲಿದೆ. ಚುನಾವಣಾ ಸಂದರ್ಭ ಇಲ್ಲಿಗೆ ಬರುವಾಗ ಜನ ಸೇರಿಸಲು ಕಷ್ಟ ಪಡುವಂತಾಗಿತ್ತು. ಆಗ ಅತ್ತೆಯಲ್ಲಿ ಮಾತನಾಡುವಾಗ, ಇಲ್ಲಿನ ಒಂದೆರಡು ಮನೆಗಳಿಗಾದ್ರು ತಡೆಗೋಡೆ ನಿರ್ಮಾಣವಾದರೆ ಉತ್ತಮ ಎಂದಿದ್ದರು. ಇಲ್ಲಿನ ಸಮಸ್ಯೆ ಎಷ್ಟಿಂತ್ತೆದರೆ, ಮಳೆಗಾಲದಲ್ಲಿ ಅವರನ್ನು ನನ್ನ ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಬಂದರು. ಒಮ್ಮೆ ಬೆಂಗಳೂರಿಗೆ ಹೋಗಿದ್ದಾಗ ತನಗೆ ಫೋನ್ ಮಾಡಿ, ಕೊಲ್ಯದ ತಡೆಗೋಡೆಯ ಬಗ್ಗೆ ಮಾಹಿತಿ ಕೇಳಿದ್ದರು. ಇದೀಗ ಆ ಕೆಲಸ ಜಾರಿಗೆ ಬಂದಿದೆ ಎಂದರು.

ನಿರೀಕ್ಷೆ ಹುಸಿಯಾಗಿಸಿದೆ: ಮಹಮ್ಮದಾಲಿ

ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ, ಐವತ್ತು ಲಕ್ಷ ರೂ. ಅನುದಾನ ನೀಡುವಂತೆ ನಾನು ಹೇಳಿದ್ದೆ. ಆದರೆ ಎರಡು ಕೋಟಿ ರೂ.ವನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಗ್ಯಾರೆಂಟಿ ಯೋಜನೆ. ಬಡವರ ಪರವಾಗಿ ಕೋಟ್ಯಾಂತರ ರೂ.ವನ್ನು ಸರಕಾರ ವ್ಯಯಿಸುತ್ತಿದೆ. ಹೀಗಾಗಿ ಸರಕಾರದಲ್ಲಿ ಹಣವಿಲ್ಲ ಎಂದಿದ್ದರು. ಇದನ್ನೇ ನಂಬಿದ್ದ ನಾನು ಇಷ್ಟೊಂದು ದೊಡ್ಡ ಅನುದಾನ ಬರಲಿಕ್ಕಿಲ್ಲ ಎಂದು ಯೋಜಿಸಿದ್ದೆ. ನನ್ನ ನಿರೀಕ್ಷೆಯನ್ನು ಹುಸಿಯಾಗಿಸಿ, ಅತಿ ಹೆಚ್ಚು ಅನುದಾನ ತರಿಸಿದ ಶಾಸಕರಿಗೆ ಅಭಿನಂದನೆ ಎಂದರು.

ಯಾಕೆ ಬಿಜೆಪಿಯಿಂದ ಹೋದೆ ಎಂದು ಯಾರು ಕೇಳುತ್ತಿಲ್ಲ: ಪೂರ್ಣಿಮಾ ರೈ

ಗ್ರಾಪಂ ಸದಸ್ಯೆ ಪೂರ್ಣಿಮಾ ಮಾತನಾಡಿ, ಈ ಹಿಂದೆ ತಾನು ಬಿಜೆಪಿಯಲ್ಲಿದ್ದೆ. ಇಲ್ಲಿ ಗುದ್ದಲಿ ಪೂಜೆ ಆದಾಗ ನಾನು ಜೊತೆಯಲ್ಲಿದ್ದೆ. ಆ ಬಳಿಕ ಇಲ್ಲಿನ ಜನ ತನ್ನಲ್ಲಿ ಕೇಳ್ತಾ ಇದ್ರು. ನಾನು ಏನು ಮಾಡುವುದು. ಗ್ರಾಪಂ ಉಪಾಧ್ಯಕ್ಷೆ ಆಗಿದ್ದರೂ ಶಾಸಕರ ಕಚೇರಿ ನೋಡಲು ಸಾಧ್ಯವಾಗಿರಲಿಲ್ಲ. ನನ್ನನ್ನು ಬಿಜೆಪಿಯಿಂದೆ ಹೋದವಳು ಎಂದರು. ಆದರೆ ಯಾಕೆ ಹೋದೆ ಎಂದು ಕೇಳಲೇ ಇಲ್ಲ. ಇಲ್ಲಿ ಒಂದು ಬೋರ್ ವೆಲ್ ಗಾಗಿ ಆಗ ಸಾಕಷ್ಟ ದುಡಿದಿದ್ದೆ. ಆದರೆ ಪ್ರಯೋಜನ ಆಗಿರಲಿಲ್ಲ. ಅಶೋಕ್ ಕುಮಾರ್ ರೈ ಶಾಸಕರಾದ ಬಳಿಕ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತಿದೆ. ಹಾಗಾಗಿ ಅಶೋಕ್ ಕುಮಾರ್ ರೈ ಅವರನ್ನು ಸಚಿವರಾಗಿ ಬರಬೇಕು. ಇದಕ್ಕಾಗಿ ಅವರನ್ನು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಬೇಕಿದೆ ಎಂದರು.

ಗ್ರಾಪಂ ಸದಸ್ಯ ಪವಿತ್ರ ರೈ, ಪದ್ಮನಾಭ ಕೊಲ್ಯ, ಬೂತ್ ಅಧ್ಯಕ್ಷ ಅಣ್ಣಿ, ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಕೈಕಾರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬೆಳ್ಳಾರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಲೋಕಾರ್ಪಣೆಗೊಳಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಬೆಳ್ಳಾರೆ: ಪುತ್ತೂರಿನಲ್ಲಿ ಪ್ರಸಿದ್ಧಿ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ…