ಪುತ್ತೂರು: ವಿಲೇವಾರಿಗೆ ಬಾಕಿಯಾಗಿರುವ ಕಡತಗಳ ಶೀಘ್ರ ವಿಲೇವಾರಿಗೊಳಿಸುವ ಹಾಗೂ ಈ ಬಗ್ಗೆ ಜನರಿಗೆ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ಯೋಜನಾ ಪ್ರಾಧಿಕಾರ ಅದಾಲತ್ ಹಾಗೂ ಮಾಹಿತಿ ನಡೆಸಲಾಗಿದ್ದು, ಯೋಜನಾ ಪ್ರಾಧಿಕಾರದಿಂದ ನಡೆಸಲಾಗುತ್ತಿರುವ ಅದಾಲತ್ ರಾಜ್ಯದಲಿಯೇ ಪ್ರಥಮವಾಗಿದೆ. ಮುಂದೆ ಕಂದಾಯ ಇಲಾಖೆ, ನಗರಸಭೆಯಲ್ಲಿಯೂ ಅದಾಲತ್ ನಡೆಸಲಾಗುವುದು ಹಾಗೂ ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಕಡತ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಶಾಸಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ವತಿಯಿಂದ ನಡೆಸಲಾದ ಪ್ರಾಧಿಕಾರದ ಅದಾಲತ್ ಮತ್ತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪುಡಾದಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಈಗಾಗಲೇ ಇಬ್ಬರು ಸಿಬಂದಿಗಳನ್ನು ನೇಮಕಗೊಳಿಸಲು ಸರಕಾರದಿಂದ ಆದೇಶ ಬಂದಿದೆ. ಪುಡಾಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಮಾಡುವ ಯೋಜನೆ ರೂಪಿಸಲಾಗಿದೆ. ಪುಡಾಕ್ಕೆ ರೂ. 6 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಅನುದಾನದಲ್ಲಿ ನಗರದ ಬೊಳುವಾರು ಮತ್ತು ದರ್ಬೆಯಲ್ಲಿ ಸರ್ಕಲ್ ನಿರ್ಮಾಣ, ಸುಮಾರು ರೂ. 35 ಲಕ್ಷ ವೆಚ್ಚದಲ್ಲಿ ಬೃಹತ್ ರಾಷ್ಟ್ರ ಧ್ವಜ ನಿರ್ಮಾಣ ಮಾಡಲಾಗುತ್ತದೆ. ಒಂದು ಕೆರೆ ಅಭಿವೃದ್ಧಿ ಮಾಡಲಾಗುವುದು. ತಲಾ 1 ಕೋಟಿಯಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ವಿದ್ಯುತ್ ದೀಪ ಅಳವಡಿಕೆ ಮತ್ತು ಜಿಮ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪುತ್ತೂರಿನಲ್ಲಿ ಯೋಜನಾ ಪ್ರಾಧಿಕಾರದ ಅದಾಲತ್ ನಡೆಸುತ್ತಿರುವ ಬಗ್ಗೆ ತಾನು ನಗರಾಭಿವೃದ್ಧಿ ಸಚಿವರ ಜೊತೆ ಚರ್ಚೆ ನಡೆಸಿದ್ದು, ಈ ಬಗ್ಗೆ ಶ್ಲಾಘಿಸಿರುವ ಅವರು ಪುತ್ತೂರಿನಲ್ಲಿ ಅದಾಲತ್ ಯಶಸ್ವಿಯಾದಲ್ಲಿ ಅದನ್ನು ರಾಜ್ಯವ್ಯಾಪಿ ವಿಸ್ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಇದು ಮುಂದೆ ರಾಜ್ಯಕ್ಕೇ ಮಾದರಿಯಾಗಿ ವಿಸ್ತರಣೆಯಾಗಲಿದೆ. ರಸ್ತೆ ಮಾರ್ಜಿನ್ ಬಿಡದೆ, ಸರಿಯಾದ ಪ್ಲಾನಿಂಗ್ ಇಲ್ಲದೆ, ಲೇಔಟ್ ಮಾಡದೆ ಮನೆಗಳನ್ನು ನಿರ್ಮಿಸಿದಲ್ಲಿ ಮುಂದಿನ ದಿನಗಳಲ್ಲಿ ನಮಗೇ ಸಮಸ್ಯೆಯಾಗಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕಾಗಿ ಇದೀಗ ಪಂಚಾಯತ್‌ನಿಂದ ಖಾತೆಯ ಕಡತಗಳನ್ನು ಪುಡಾಕ್ಕೆ ಹಸ್ತಾಂತರಗೊಳಿಸಲಾಗಿದೆ. ಅದಾಲತ್ ಮೂಲಕ ಫಲಾನುಭವಿಗಳು ಸ್ಥಳದಲ್ಲಿಯೇ ದಾಖಲೆಗಳನ್ನು ಸಮರ್ಪಕಗೊಳಿಸಿ, ಅಲ್ಲಿಯೇ ಹಣ ಪಾವತಿಸಿ ಅದೇಶವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
9/11 ಗೆ ಸಂಬಂಧಿಸಿ 2 ತಾಲೂಕುಗಳಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಸರಿಯಾದ ದಾಖಲೆ ಒದಗಿಸುವಂತೆ ಹಿಂಬರಹ ನೀಡಿದ 556 ಕಡತಗಳ ವಿಲೇವಾರಿಗೆ ಅದಾಲತ್ ನಡೆಸುತ್ತಿರುವ ಕುರಿತು ಅವರಿಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ 250 ಕಡತಗಳ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಉಳಿದ ಕಡತದವರು ಆಸಕ್ತಿ ತೋರಿಲ್ಲ. ಅವರಿಗೂ ಮುಂದಿನ ದಿನಗಳಲ್ಲಿ ಸರಿಪಡಿಸಲು ಅವಕಾಶ ನೀಡಲಾಗುವುದು. ಕಟ್‌ಕನ್ವರ್ಷನ್ ಕಟ್ಟಡಗಳಿಗೆ ಈಗಾಗಲೇ ಬಿ ಖಾತೆ ನೀಡಲಾಗಿದೆ. ಮುಂದೆ ಅವರ ದಾಖಲೆಗಳು ಸಮರ್ಪಕವಾಗಿದ್ದ ಎ ಖಾತೆಯನ್ನು ಸರ್ಕಾರ ನೀಡಲಿದೆ. ಅಂತಹ ಸಂದರ್ಭದಲ್ಲಿ ಸೆಟ್‌ಬ್ಯಾಕ್ ಇಲ್ಲದಿದ್ದಲ್ಲಿ ತೊಂದರೆಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು 9/11 ಮಾಡದಿದ್ದರೆ ಮನೆ ನಂಬ್ರ, ವಿದ್ಯುತ್ ಸಂಪರ್ಕವನ್ನೂ ಪಡೆಯಲು ಆಗುವುದಿಲ್ಲ. ಇದನ್ನು ಸರಿಪಡಿಸಿ ಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಪ್ರಯೋಜನವಿದೆ. ಅಭಿವೃದ್ಧಿ ಹಾಗೂ ಸಮರ್ಪಕ ಯೋಜನೆಗಾಗಿ ಈ ವ್ಯವಸ್ಥೆ ಇದೆ ಎಂದು ಹೇಳಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ 9/11 ಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಬದಲಾವಣೆಗಳು ಆಗಿರುವ ಕಾರಣದಿಂದಾಗಿ ಸಾಕಷ್ಟು ಮಂದಿಗೆ ಸಮಸ್ಯೆ ಉಂಟಾಗಿದೆ. ಪುಡಾದಲ್ಲಿ ಬಂದಿರುವ ಅರ್ಜಿಗಳ ಪೈಕಿ ಶೇ. 57ರಷ್ಟು ಅರ್ಜಿಗಳು ಅನುಮೋದನೆಗೊಂಡು ವಿಲೇವಾರಿಯಾಗಿವೆ. ಉಳಿದಂತೆ ಸಮರ್ಪಕ ದಾಖಲೆಗಳ ಕೊರತೆಯಿಂದ ಅನುಮೋದನೆಗೊಳ್ಳದೆ ಹಿಂಬರಹ ನೀಡಲಾಗಿದೆ. ಇದೀಗ ಕಚೇರಿಯಲ್ಲಿ 20 ಕಡತಗಳು ಮಾತ್ರ ಉಳಿದುಕೊಂಡಿದೆ. ಮುಂದ ಪ್ರತಿ 6 ತಿಂಗಳಿಗೊಮ್ಮೆ ಯೋಜನಾ ಪ್ರಾಧಿಕಾರದ ಅದಾಲತ್ ನಡೆಸುವ ಮೂಲಕ ಎಲ್ಲಾ ಅರ್ಜಿಗಳ ತ್ವರಿತ ವಿಲೇವಾರಿ ಮಾಡಲಾಗುವುದು. 2025ರ ಮೇ 7ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ನಿವೇಶನ, ಬಹುನಿವೇಶನ, ಕಟ್ಟಡಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಸಂಬಂಧ 4 ಕೆ ನಿಯಮಗಳನ್ನು ನಿರೂಪಿಸಲಾಗಿದೆ. ಈ ನಿಯಮಾವಳಿಯಂತೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲು ಕೆಲವೊಂದು ಗೊಂದಲಗಳು ಹಾಗೂ ನಿಯಮಾವಳಿಗಳ ಅಂಶಗಳನ್ನು ಅರ್ಥೈಸಿಕೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಿಸಿ ಈ ಅದಾಲತ್ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ. ಶೆಟ್ಟಿ, ಅನ್ವರ್ ಖಾಸಿಂ ಉಪಸ್ಥಿತರಿದ್ದರು.
ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸದಸ್ಯ ಲ್ಯಾನ್ಸಿ ಮಸ್ಕರೇನಸ್ ವಂದಿಸಿದರು.