ಪುತ್ತೂರು: ನಿನ್ನೆವರೆಗೆ ಕಾಂಗ್ರೆಸ್ ಆಡಳಿತವಿತ್ತು. ಇಂದಿನಿಂದ ಬಿಜೆಪಿ ಆಡಳಿತ ಶುರುವಾಗಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹಾಸ್ಯಭರಿತ ಮಾತಿಗೆ ಸಭೆ ನಗೆಗಡಲಲ್ಲಿ ತೇಲಾಡಿತು.
ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನ ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ ಅವರು ಕೃಷ್ಣಪ್ರಸಾದ್ ಆಳ್ವ ಅವರಿಂದ ಅಧಿಕಾರ ಸ್ವೀಕರಿಸಿದರು.
ಸಾಜ ರಾಧಾಕೃಷ್ಣ ಆಳ್ವ ಅವರು ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷರು. ಕೃಷ್ಣಪ್ರಸಾದ್ ಆಳ್ವ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
ಹಾಸ್ಯಕ್ಕಾಗಿ ಹೀಗೆ ಹೇಳಿದೆ ಎಂದು ಮಾತು ಮುಂದುವರಿಸಿದ ನಳಿನ್ ಕುಮಾರ್ ಕಟೀಲ್, ಪಕ್ಷಗಳು ಭಿನ್ನವಾಗಿದ್ದರೂ ಯಾವುದೇ ಗೊಂದಲ, ಅಧಿಕಾರದ ಆಸೆಯಿಲ್ಲದೇ ಇಂದಿನ ಪದಪ್ರದಾನ ಸಮಾರಂಭ ನಡೆದಿದೆ ಎನ್ನುವುದು ರೋಟರಿಯ ಹೆಚ್ಚುಗಾರಿಕೆ. ಇದನ್ನು ರೋಟರಿಯಲ್ಲಿ ಮಾತ್ರ ಕಾಣಲು ಸಾಧ್ಯ. ಹೃದಯದ ಭಾವನೆ ಅದು ಮಾನವೀಯತೆ ಮಾತ್ರ ಎನ್ನುವುದು ಇಲ್ಲಿ ಪ್ರತಿಬಿಂಬಿತವಾಗಿದೆ ಎಂದರು.
ಸಾಜ ರಾಧಾಕೃಷ್ಣ ಆಳ್ವ ಅವರು ಧಾರ್ಮಿಕ, ಸಾಮಾಜಿಕವಾಗಿ ಗುರುತಿಸಿಕೊಂಡವರು. ರಾಜಕೀಯದಲ್ಲಿ ಉನ್ನತ ಹುದ್ದೆ ಸಿಕ್ಕಾಗಲೂ, ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದೀಗ ರೋಟರಿಯ ಅಧ್ಯಕ್ಷರಾಗಿ ರೋಟರಿಯ ಆದರ್ಶವನ್ನು ಬಿರುಮಲೆ ಬೆಟ್ಟದಷ್ಟು ಎತ್ತರಕ್ಕೆ ತಲುಪಿಸಲಿ ಎಂದು ಶುಭಹಾರೈಸಿದರು.
ಪದಪ್ರದಾನ ಅಧಿಕಾರಿಯಾಗಿದ್ದ ರೋಟರಿ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ಶುಭಹಾರೈಸಿದರು.
ಪುತ್ತೂರಿನಲ್ಲಿ ರೋಟರಿಯನ್ನು ಸ್ಥಾಪಿಸಿದ್ದ ರತ್ನಾಕರ ಶೆಣೈ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಝೋನಲ್ ಲೆಫ್ಟಿನೆಂಟ್ ಶಶಿಧರ್ ಬಿ.ಕೆ., ಸಾಜ ರಾಧಾಕೃಷ್ಣ ಆಳ್ವ ಅವರ ಪತ್ನಿ ಇಂದಿರಾ, ಕ್ಲಬ್ ಕಾರ್ಯದರ್ಶಿ ರುಕ್ಮಯ ಕುಲಾಲ್ ಉಪಸ್ಥಿತರಿದ್ದರು.