ಇಂದು( ಜನವರಿ 26) ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ತಾಲೂಕು ಆಡಳಿತ ವತಿಯಿಂದ ನಡೆಯುವ ತಾಲೂಕು ಮಟ್ಟದ ಗಣರಾಜ್ಯೋತ್ಸವದ ದಿನಾಚರಣೆಯಂದು ಸಾಹಿತ್ಯ ಸಂಘಟನೆ ಹಾಗೂ ಸಮಾಜಸೇವೆಗಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರನ್ನು ಹಾಗೂ ಶಿಕ್ಷಣ ಹಾಗೂ ದೇಶ ಸೇವೆಗೆ ಸಲ್ಲಿಸಿದ ಸೇವೆಗಾಗಿ ವಿದ್ಯಾ ಮಾತ ಸಂಸ್ಥೆಯ ಭಾಗ್ಯೇಶ ರೈ ಇವರನ್ನು ತಾಲೂಕು ಗಣರಾಜ್ಯೋತ್ಸವ ದಿನಾಚರಣೆ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪುತ್ತೂರಿನ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಹಾಗೂ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೊಹಾಪಾತ್ರ ಮುಂತಾದ ಗಣ್ಯರ ಸಮಕ್ಷಮದಲ್ಲಿ ಇವರನ್ನು ಸನ್ಮಾನಿಸಲಾಗುವುದು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ್ದಿದ್ದು, ಇವರು ಈವರೆಗೆ ನೂರಕ್ಕೂ ಅಧಿಕ ನಿರ್ಗತಿಕ ಅನಾಥ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸಿ ಕೊಟ್ಟಿದ್ದಾರೆ. ಪುತ್ತೂರು ತಾಲೂಕಿನ 32 ಗ್ರಾಮದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಹಿತ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಐ.ಎ.ಎಸ್- ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಮಾಹಿತಿಯನ್ನು ಸಾಹಿತ್ಯ ಪರಿಷತ್ ಮೂಲಕ ನೀಡುತ್ತಿದ್ದು, ಕನ್ನಡದಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯಬಹುದೆಂಬ ಅರಿವನ್ನ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಈವರೆಗೆ 20000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು,ರಾಜ್ಯದಲ್ಲೇ ವಿನೂತನ ಕಾರ್ಯಕ್ರಮ ಇದಾಗಿದೆ.
ಇವರು ತಾಲೂಕು ಆಡಳಿತದ ಹಾಗೂ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಜೊತೆಗೆ ಉತ್ತಮ ಸಮನ್ವಯ ಸಾಧಿಸಿ ಇಲಾಖೆಯಿಂದ ನಡೆಸುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇಲಾಖೆಗಳಿಗೆ ಬಹಳ ಸಹಕಾರಿಯಾಗಿದ್ದಾರೆ.
ಪ್ರಸ್ತುತ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ತಮ್ಮ ಸಾಹಿತ್ಯ ಸೇವೆ – ಸಮಾಜಸೇವೆ – ಸಂಘಟನಾತ್ಮಕ ಸೇವಾ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು ಇದರ ವತಿಯಿಂದ ನಡೆದ ಗಣರಾಜ್ಯೋತ್ಸವ -2025 ರ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಇವರ ಅಧ್ಯಕ್ಷತೆಯಲ್ಲಿ ಅಭಿನಂದನೆ ಸ್ವೀಕರಿಸಲಿದ್ದಾರೆ.ಇವರು
ಪತ್ನಿ ರೂಪಶ್ರೀ ನಾಯಕ್ ಹಾಗೂ ಪುತ್ರ ಸಾತ್ವಿಕ್ ನಾಯಕ್ ಜೊತೆಗೆ ದರ್ಬೆಯಲ್ಲಿ ವಾಸವಾಗಿದ್ದಾರೆ.
*ಶ್ರೀ ಭಾಗ್ಯೇಶ ರೈ ಕಿರು ಪರಿಚಯ*
ಶ್ರೀ ಭಾಗ್ಯಶ್ ರೈ ಇವರು ವಿದ್ಯಾಮಾತಾ ಫೌಂಡೇಶನ್ ಮೂಲಕ ಕರಾವಳಿ ಕರ್ನಾಟಕ ಭಾಗದ 200ಕ್ಕೂ ಹೆಚ್ಚು ಯುವ ಅಭ್ಯರ್ಥಿಗಳನ್ನು ಭಾರತೀಯ ಸೇನೆ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಲು ತರಬೇತಿ ನೀಡಿದ್ದಾರೆ.
ಇವರ ಸಂಸ್ಥೆಯಲ್ಲಿ ಭಾರತೀಯ ಸೇನೆ ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು,ಪ್ರತಿ ವರ್ಷ ಒಟ್ಟು 100 ಅಭ್ಯರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ .ಭಾರತ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅಗ್ನಿಪಥ್ ಯೋಜನೆಗೆ ಕರಾವಳಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ ತರಬೇತಿಯನ್ನು ಆಯೋಜನೆ ಮಾಡಿರುವ ಫಲಿತಾಂಶವಾಗಿ ಪ್ರಥಮ ನೇಮಕಾತಿಯಲ್ಲೇ 7 ಅಭ್ಯರ್ಥಿಗಳು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಇವರ ಸಂಸ್ಥೆಯ ಮೂಲಕ ಈವರೆಗೆ ಸಶಸ್ತ್ರ ಪಡೆಗಳಿಗೆ ಒಟ್ಟು 21 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ.
ಇವರ ಸಂಸ್ಥೆಯ ಮೂಲಕ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ನೇಮಕಾತಿಗಳಿಗೂ ತರಬೇತಿಯನ್ನು ನೀಡಲಾಗುತ್ತಿದ್ದು ಒಬ್ಬ ಸಬ್ಇನ್ಸ್ಪೆಕ್ಟರ್, ಎರಡು ಕಾನ್ಸ್ಟೇಬಲ್ ಹಾಗೂ ಒಬ್ಬರು ಅರಣ್ಯ ಇಲಾಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ . ಜೊತೆಗೆ ಸುಮಾರು 80 ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಗಳಿಗೆ ಪೂರ್ವಭಾವಿ ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಇನ್ನೂರಕ್ಕು ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ನೇಮಕಾತಿಗಳು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಸ್ತುತ ಇವರು ಜೆಸಿಐ ಪುತ್ತೂರು ಘಟಕದ ಅಧ್ಯಕ್ಷರಾಗಿದ್ದಾರೆ.