ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಫೆ.21 ಮತ್ತು 22ರಂದು ನಡೆಯುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ಸುಳ್ಯದಲ್ಲಿ ನೆಲೆಸಿರುವ ಡಾ.ಪ್ರಭಾಕರ ಶಿಶಿಲರು ಕನ್ನಡದ ಶ್ರೇಷ್ಠ ಸಾಹಿತಿ. ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ, 5 ಪ್ರವಾಸ ಕಥನ ಸೇರಿ ಒಟ್ಟು 54 ಸೃಜನಶೀಲ ಕೃತಿಗಳು, 165 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು ಹಾಗೂ ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ. ಒಟ್ಟು 225 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಇವರ ಸುಮಾರು 250ಕ್ಕೂ ಅಧಿಕ ಲೇಖನಗಳು ಪ್ರಕಟವಾಗಿವೆ.
ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ. ಇವರು ಬರೆದ ಪುಲಸ್ತ್ರೀ ಕೃತಿ ಸಂಸ್ಕೃತ, ಹಿಂದಿ, ಮಲಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ, ಕೊಡವ, ಗುಜರಾಥಿ, ಬೆಂಗಾಲಿ, ಪಂಜಾಬಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿದೆ. ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಈ ಹಿಂದೆ ಸುಳ್ಯ ತಾಲೂಕಿನವರಾದ ಪ್ರೊ.ಕೋಡಿ ಕುಶಾಲಪ್ಪ ಗೌಡ, ಸುಬ್ರಾಯ ಚೊಕ್ಕಾಡಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.