ಇಂದಿನ ಬೆಂಗಳೂರು ಜಿಲ್ಲೆಯಲ್ಲಿ ಪುರಾತತ್ತ್ವ ಉತ್ಖನನಗಳಾವುವೂ ನಡೆದಿಲ್ಲ. ನಡೆದಿರುವ ಸಣ್ಣಪ್ರಮಾಣದ ಕೆಲವು ಉತ್ಖನನಗಳಲ್ಲಿ (ಉತ್ಖನನವೆನ್ನುವುದಕ್ಕಿಂತ ಅನ್ವೇಷಣೆ ಎಂಬ ಪದ ಹೆಚ್ಚು ಸೂಕ್ತ) ನೇರವಾಗಿ ಕೃಷಿಗೆ ಸಂಬಂಧಪಟ್ಟ ವಿವರಗಳು ದೊರೆತಿಲ್ಲ. ಆಹಾರಕ್ಕೆ ಸಂಬಂಧಪಡುವ ಅವಶೇಷಗಳೂ ದೊರೆತಿಲ್ಲ. ಒಂದೆರಡು ಕಡೆ ದೊರೆತಿವೆ ಎಂದು ವರದಿಯಾಗಿದ್ದರೂ ವಿವರಗಳು ಅಸ್ಪಷ್ಟ. ಆಹಾರ ಪದ್ಧತಿಗೆ ಸಂಬಂಧಪಡುವ ಕೆಲವೊಂದು ಪಾತ್ರೆಗಳು ದೊರೆತಿವೆ ಎಂದು ಅಸ್ಪಷ್ಟವಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ ಹಾಗೂ ಹಸುರಿನ ವಿವರಗಳನ್ನು ತಿಳಿಯಲು ಶಾಸನಗಳು, ಸಾಹಿತ್ಯಕೃತಿಗಳು ಹಾಗೂ ಆಧುನಿಕ ಕಾಲದ ಕೆಲವು ಗ್ರಂಥಗಳು ಮಾತ್ರ ನೆರವು ನೀಡುತ್ತವೆ. ಇಂದು ನಗರೀಕರಣ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗಿ ಹೊಲಗದ್ದೆಗಳಿದ್ದ ಪ್ರದೇಶಗಳು ನಾಶವಾಗಿವೆ.
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಸಂವರ್ಧನೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನವಾಗಿದೆ. ಇದು ನಾಗರಿಕತೆಯ ಉತ್ಕರ್ಷಕ್ಕೆ ಕಾರಣವಾದ ಒಂದು ಪ್ರಮುಖ ಬೆಳವಣಿಗೆಯಾಗಿತ್ತು. ಕೃಷಿ ಮತ್ತು ಕೃಷಿಕರ ಉಲ್ಲೇಖಗಳು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಸಂಕಲನವೆಂದು ಒಮ್ಮತದಿಂದ ಅಂಗೀಕರಿಸಿರುವ ಋಗ್ವೇದದಲ್ಲಿಯೇ ಕಂಡುಬರುತ್ತವೆ. ಪಶುಪಾಲನೆ ಮತ್ತು ವ್ಯವಸಾಯವೇ ಆ ಕಾಲದ ಪ್ರಮುಖವಾದ ವೃತ್ತಿಯಾಗಿತ್ತು. ಬಡಗಿ, ಕಮ್ಮಾರ, ವೈದ್ಯ, ಯಾಜಕ ಮುಂತಾದ ವೃತ್ತಿಗಳನ್ನು ಮಾಡುತ್ತಿದ್ದವರ ಉಲ್ಲೇಖ ಋಗ್ವೇದದಲ್ಲಿದೆ (೯-೧೧೧-೧). ಕೃಷಿಯ ಬಗೆಗೆ ವೇದದಲ್ಲಿ ದೊರಕುವ ವಿವರಗಳಲ್ಲಿ ಒಂದು ಇಂತಿದೆ.
ಯುನಕ್ತಸೀರಾ ವಿಯುಗಾ ತನುಧ್ವಂ
ಕೃತೇ ಯೋನೌ ವಪತೇಹ ಬೀಜಂ
ಗಿರಾ ಚ ಶ್ರುಷ್ಟಿಃ ಸಭರಾ ಅಸನ್ನೋ
ನೇದೀಯ ಇತ್ಸ್ಮಮಣ್ಯಃ ಪಕ್ವಮೇಯಾತ್ || ೧೦-೧೦೧-೩ ||
[ನೇಗಿಲನ್ನು ಹೂಡಿ, ನೊಗಗಳನ್ನು ವಿಸ್ತಾರಗೊಳಿಸಿಕೊಂಡು, ಉಳುಮೆ ಮಾಡಿದ ಸಾಲುಗಳಲ್ಲಿ ಕಾಳುಗಳನ್ನು ಬಿತ್ತನೆ ಮಾಡಿದರೆ, ನಮ್ಮ ಪ್ರಾರ್ಥನೆ ಅಥವಾ ಸ್ತುತಿಯಿಂದ ಸಮೃದ್ಧವಾದ ಬೆಳೆಯಾಗುತ್ತದೆ. ಕೊಯ್ಲನ್ನು ಮಾಡುವವರು ಕುಡುಗೋಲುಗಳೊಡನೆ ಮಾಗಿದ ಪೈರಿನ ಕಡೆ ಬರುವಂತಾಗಲಿ]
ಕೃಷಿಮಿತ್ ಕೃಷಸ್ವ (೫-೩೪-೧೩) ಎಂದು ಹೇಳುವ ಉದ್ದೇಶವೇನೆಂದರೆ ಪ್ರಾಮಾಣಿಕವಾದ ವೃತ್ತಿಯಿಂದ ಜೀವನವನ್ನು ಸಂಪಾದಿಸಬೇಕು ಎಂಬುದಾಗಿದೆ. ಕೃಷಿಗೆ ಅಗತ್ಯವಾದ ನೀರಾವರಿ ಕಾಲುವೆಗಳ ಉಲ್ಲೇಖಗಳೂ ಋಗ್ವೇದದಲ್ಲಿವೆ. (೩-೪೫-೩; ೭-೪೯-೨)
ವೇದದಲ್ಲಿರುವ ಪರ್ಜನ್ಯಸೂಕ್ತವು ನಮ್ಮ ಪೂರ್ವಿಕರು ಮಳೆ ಮತ್ತು ನೀರಾವರಿಗೆ ಎಷ್ಟು ಪ್ರಾಮುಖ್ಯವನ್ನು ಕೊಟ್ಟಿದ್ದರು ಎಂಬುದಕ್ಕೆ ಉತ್ಕೃಷ್ಟ ಉದಾಹರಣೆಯಾಗಿದೆ. ಏಕೆಂದರೆ ಮಳೆಯಿಲ್ಲದೆ ಕೃಷಿವ್ಯವಸ್ಥೆ ನಡೆಯಲು ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಜೀವನದಿಗಳ ಅವಲಂಬನೆಯಿದ್ದರೆ, ದಕ್ಷಿಣಭಾರತದಲ್ಲಿ ಬಲುಮಟ್ಟಿಗೆ ಮಳೆಯ ಆಧಾರದಿಂದಲೇ ಹರಿಯುವ ನದಿಗಳಿವೆ. ಇದರಿಂದಾಗಿ ಪ್ರದೇಶವಾರು ಬೇರೆ ಬೇರೆ ರೀತಿಯ ನೀರಾವರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಯಿತೆಂದು ಲಭ್ಯವಿರುವ ಆಧಾರಗಳು ಹೇಳುತ್ತವೆ. ಋಗ್ವೇದದಲ್ಲಿ ನದಿಗಳನ್ನು ಸ್ತುತಿಸುವ ಸೂಕ್ತಗಳೇ ಇವೆ. ನದಿಗಳೇ ಮಾನವನ ಜೀವ, ಜೀವನಾಡಿಗಳಾದ ಕಾರಣ ಈ ಸೂಕ್ತಗಳು ರೂಪಗೊಂಡಿವೆ. ಇದೇ ರೀತಿಯಾಗಿ ಪರ್ಜನ್ಯಸೂಕ್ತವೂ ಸಹ. ಯಜರ‍್ವೇದದ ಚಮಕಪ್ರಶ್ನದಲ್ಲಿ (ಸಸ್ವರ ವೇದಮಂತ್ರಾಃ, ಪ್ರಕಟನೆ: ಶ್ರೀರಾಮಕೃಷ್ಣ ಆಶ್ರಮ, ಮೈಸೂರು-೨೦೧೦, ಪುಟ ೧೪೮) ವ್ರೀಹಿ (ಅಕ್ಕಿ), ಯವೆ (ಬಾರ್ಲಿ), ಮಾಷಾ (ಉದ್ದು), ತಿಲ (ಎಳ್ಳು), ಮುದ್ಗ (ಹೆಸರುಕಾಳು), ಖಲ್ವ (ದ್ವಿದಳ ಧಾನ್ಯ), ಗೋಧೂಮ (ಗೋಧಿ) ಧಾನ್ಯಗಳ ಉಲ್ಲೇಖವಿದೆ. ಇಂತಹ ಅನೇಕ ವಿವರಗಳು ವೇದಗಳಲ್ಲಿ ದೊರಕುತ್ತವೆ.
ಈ ವಿವರಗಳಿಂದ ಭಾರತದೇಶದ ಕೃಷಿಯು ಬಹಳ ಪ್ರಾಚೀನವಾದುದೆಂದೂ ಇಂದಿನ ವರೆಗೂ ಅದು ಬಲುಮಟ್ಟಿಗೆ ಸ್ವಸ್ವರೂಪದಲ್ಲಿಯೇ ಉಳಿದುಕೊಂಡು ಬಂದಿದೆ ಎಂದೂ ಹೇಳಬಹುದಾಗಿದೆ. ಇದಕ್ಕೆ ಸರಸ್ವತೀ ನದಿ ಕೊಳ್ಳದ ಉತ್ಖನನಗಳೂ (The Sarasvati Civilization by Major General G.D Bakshi, Garuda Prakashan, Haryana-2019) ಹಾಗೂ ಬೇರೆ ಬೇರೆ ಪ್ರದೇಶಗಳ ಉತ್ಖನನಗಳೂ ಪೋಷಕವಾಗಿವೆ.
ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲ್ಲೂಕು ೪೮೬ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರ ಜಿಲ್ಲೆಯು ೫ ತಾಲ್ಲೂಕುಗಳನ್ನು ಹೊಂದಿದ್ದು {ಬೆಂಗಳೂರು ಉತ್ತರ ಅಥವಾ ಬೆಂಗಳೂರು, ಬೆಂಗಳೂರು ದಕ್ಷಿಣ ಅಥವಾ ಕೆಂಗೇರಿ, ಬೆಂಗಳೂರು ಪೂರ್ವ ಅಥವಾ ಕೃಷ್ಣರಾಜಪುರ, ಯಲಹಂಕ ಮತ್ತು ಆನೇಕಲ್}, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ೪ ತಾಲ್ಲೂಕುಗಳನ್ನು ಹೊಂದಿದೆ (ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ). ಬೆಂಗಳೂರು ಪ್ರದೇಶವು ಸಮುದ್ರಮಟ್ಟದಿಂದ ಸುಮಾರು ೯೧೪ ಮೀಟರ್ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨o ೩೯o G ಹಾಗೂ ೧೩o G ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪oC ರಿಂದ ೩೫oC ರವರೆಗೆ ಉಷ್ಣಾಂಶವಿರುವುದು. ದಕ್ಷಿಣ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ಥಭೂಮಿಯ ಹೃದಯಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. ೭೪೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು ೫.೮ ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆಯ ನಗರ) ಜನಸಂಖ್ಯೆಯನ್ನು ಹೊಂದಿದೆ. ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದು ಕಾಲದಲ್ಲಿ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ಈ ಕಾರಣದಿಂದಲೇ ಬೆಂಗಳೂರನ್ನು ‘ನಿವೃತ್ತಿ ಹೊಂದಿದವರ ಸ್ವರ್ಗ’ ಎಂದೂ ಕೂಡ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ೨೦ರಿಂದ ೩೬ ಡಿಗ್ರಿಯಿದ್ದು, ಚಳಿಗಾಲದಲ್ಲಿ ೧೭ ರಿಂದ ೨೭ ಡಿಗ್ರಿಯಾಗಿರುತ್ತದೆ (ಈಚಿನ ದಿನಗಳ ಚಳಿಗಾಲದಲ್ಲಿ ಥಂಡಿ ಎನ್ನುವುದು ೧೩ ಡಿಗ್ರಿಗೂ ಇಳಿದಿರುವುದು ಹಾಗೂ ವ್ಯಾಪಕವಾಗಿ ವಾತಾವರಣ ವ್ಯತ್ಯಯವಾಗುತ್ತಿರುವುದು ಗಮನಾರ್ಹ).
ಇಂದಿನ ಬೆಂಗಳೂರು ಜಿಲ್ಲೆಯಲ್ಲಿ ಪುರಾತತ್ತ್ವವ ಉತ್ಖನನಗಳಾವುವೂ ನಡೆದಿಲ್ಲ. ನಡೆದಿರುವ ಸಣ್ಣಪ್ರಮಾಣದ ಕೆಲವು ಉತ್ಖನನಗಳಲ್ಲಿ (ಉತ್ಖನನವೆನ್ನುವುದಕ್ಕಿಂತ ಅನ್ವೇಷಣೆ ಎಂಬ ಪದ ಹೆಚ್ಚು ಸೂಕ್ತ) ನೇರವಾಗಿ ಕೃಷಿಗೆ ಸಂಬಂಧಪಟ್ಟ ವಿವರಗಳು ದೊರೆತಿಲ್ಲ. ಆಹಾರಕ್ಕೆ ಸಂಬAಧಪಡುವ ಅವಶೇಷಗಳೂ ದೊರೆತಿಲ್ಲ. ಒಂದೆರಡು ಕಡೆ ದೊರೆತಿದೆ ಎಂದು ವರದಿಯಾಗಿದ್ದರೂ ವಿವರಗಳು ಅಸ್ಪಷ್ಟ. ಆಹಾರ ಪದ್ಧತಿಗೆ ಸಂಬಂಧಪಡುವ ಕೆಲವೊಂದು ಪಾತ್ರೆಗಳು ದೊರೆತಿವೆ ಎಂದು ಅಸ್ಪಷ್ಟವಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ ಕೃಷಿ ಸಂಸ್ಕೃತಿ ಹಾಗೂ ಹಸುರಿನ ವಿವರಗಳನ್ನು ತಿಳಿಯಲು ಶಾಸನಗಳು, ಸಾಹಿತ್ಯಕೃತಿಗಳು ಹಾಗೂ ಆಧುನಿಕ ಕಾಲದ ಕೆಲವು ಗ್ರಂಥಗಳು ಮಾತ್ರ ನೆರವು ನೀಡುತ್ತವೆ. ಕೆಲವೊಂದು ಸಾಹಿತ್ಯಿಕ ಕೃತಿಗಳಲ್ಲಿ ಕೃಷಿಕರ ವಿವರ ಅಲ್ಲಲ್ಲಿ ದೊರಕುತ್ತದೆ. ವಿಖ್ಯಾತ ಶಾಸನತಜ್ಞ ಲೂಯಿ ರೈಸ್ ಅವರ ಮೈಸೂರು ಗೆಝೆಟಿಯರ್‌ನಲ್ಲಿ ಕೆಲವೊಂದು ವಿವರಗಳು ದೊರಕುತ್ತವೆ. ಈ ವಿವರಗಳು ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿ ಇಂದಿನ ಸ್ವರೂಪಕ್ಕೆ ಸದೃಶವಾಗಿಯೇ ಇವೆ. ಬೆಂಗಳೂರಿನ ಪ್ರದೇಶ ಬಲುಮಟ್ಟಿಗೆ ಹೊಲಗದ್ದೆಗಳಿದ್ದ ಪ್ರದೇಶವೇ ಆಗಿತ್ತು ಎಂಬುದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಆತ್ಮಕಥೆ ‘ಭಾವ’ ಸಂಪುಟಗಳು, ತಿ.ತಾ. ರ‍್ಮ ಮತ್ತು ಡಿ.ವಿ. ಗುಂಡಪ್ಪನವರ ಬರಹಗಳು ಮೊದಲಾದ ಆಕರಗಳಲ್ಲಿನ ಸಾಂರ‍್ಭಿಕ ವಿವರಗಳು ಸಾಬೀತು ಮಾಡುತ್ತವೆ. ಇಂದು ನಗರೀಕರಣ ಪ್ರಕ್ರಿಯೆ ಅತ್ಯಂತ ವೇಗವಾಗಿ ಸಾಗಿ ಹೊಲಗದ್ದೆಗಳಿದ್ದ ಪ್ರದೇಶಗಳು ನಾಶವಾಗಿವೆ. ಶಾಸನಗಳಲ್ಲಿ ಹೊಲಗದ್ದೆಗಳ ವಿವರಗಳು ದಾಖಲಾಗಿರುವ ಕಾರಣ, ಆ ಕಾಲದ ಸ್ವರೂಪವನ್ನು ನಾವು ಪುನಾರಚಿಸಿಕೊಳ್ಳಬೇಕಿದೆ. ಆ ಕಾಲದಲ್ಲಿ (ಪ್ರಾಚೀನ ಕಾಲ ಮತ್ತು ೧೮೦೦-೧೯೦೦ ರ ಸುಮಾರು) ಬಳಕೆಯಲ್ಲಿದ್ದ ಎಷ್ಟೋ ಬೆಳೆಗಳ ದೇಶೀ ಹೆಸರುಗಳು, ತಳಿಗಳು ಇಂದು ನಮಗೆ ಕೈತಪ್ಪಿಹೋಗಿವೆ. ಉದಾಹರಣೆಗೆ: ಲೂಯಿ ರೈಸರು ತಮ್ಮ ಮೈಸೂರು ಗೆಜೆಟಿಯರ್‌ನಲ್ಲಿ ಸುಮಾರು ೨೧ ಬಗೆಯ ಬಾಳೆಹಣ್ಣು ತಳಿಗಳ ಹೆಸರುಗಳನ್ನು ದಾಖಲಿಸಿದ್ದಾರೆ. ಇಂತಹವುಗಳ ಬಗೆಗೆ ಕೋಶವೊಂದು ರಚನೆಯಾಗಬೇಕಾದ ಅಗತ್ಯವಿದೆ.
ಪ್ರಾಚೀನ ಬೆಂಗಳೂರಿನ ಕೃಷಿ ಸಂಸ್ಕೃತಿ, ಶಾಸನಗಳಲ್ಲಿ ಕಂಡುಬರುವ ಕೃಷಿಭೂಮಿಯ ವಿವರಗಳು : ಬೆಂಗಳೂರು ಜಿಲ್ಲೆಯ ಶಾಸನಗಳಲ್ಲಿ ಬೆಳೆಗಳ ವಿವರ ದೊರಕುವುದು ಅಪರೂಪ. ದಾನಗಳನ್ನು ನೀಡಿರುವ ಸಮಯದಲ್ಲಿ ಉಲ್ಲೇಖಗೊಂಡಿರುವ ಅಡಕೆ, ಎಲೆ ಇತ್ಯಾದಿಗಳನ್ನು ಈ ಜಿಲ್ಲೆಯ ಬೆಳೆಗಳೆಂದು ನೇರವಾಗಿ ಹೇಳುವುದು ಸಮರ್ಥನೀಯವಲ್ಲ. ಇಂತಹ ಕೆಲವು ಪದಾರ್ಥಗಳಿಗೆ ಸುಂಕವನ್ನು ಹೇರಲಾಗುತ್ತಿತ್ತು. ಇವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ ವಿವರಗಳು ಶಾಸನೋಕ್ತವಾಗಿವೆ. ಭೂಮಿಯನ್ನು ದಾನ ಕೊಟ್ಟಿರುವ ವಿವರಗಳನ್ನು ಶಾಸನಗಳು ಧಾರಾಳವಾಗಿ ದಾಖಲಿಸಿವೆ. ಈ ಸಂದರ್ಭದಲ್ಲಿ ಗದ್ದೆ, ಬೆದ್ದಲು ಇತ್ಯಾದಿ ಶಬ್ದಗಳು ಸೀಮಾ ವಿವರಗಳ ಸಹಿತ ಶಾಸನಗಳಲ್ಲಿ ದೊರಕುತ್ತವೆ. ಉದಾಹರಣೆಗೆ:
ಆವೂರ ಗದ್ದೆ ಬೆದ್ದಲು {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೨೨}
ಮಾವಿನಕೆಱೆಹುರವಾಮಾರಾಡಿಯಕೆಱೆಯವೊಳಗಾ ದಚತುಸ್ಸೀಮೆಯ ಗದ್ದೆ ಬೆಜ್ಜಲನು {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೨೪}
ಕೃಷಿಯೇ ಪ್ರಧಾನವಾಗಿರುವ ನಾಡಿನಲ್ಲಿ ಕೃಷಿಗೆಂದು ಎಂಬ ಉಲ್ಲೇಖವನ್ನು ಮಾಡುವ ಅಗತ್ಯವಂತೂ ನಾಡಿನವರಿಗೆ ಕಂಡುಬಂದಿಲ್ಲ. ನೀರಾವರಿಗೆ, ಕೆರೆಗಳಿಗೆ ಸಂಬಂಧಪಡುವ ವಿವರಗಳು ಶಾಸನಗಳಲ್ಲಿವೆ. ಇವುಗಳ ಬಗೆಗೆ ಈಗಾಗಲೇ ಅಧ್ಯಯನವೂ ನಡೆದು ಬರಹಗಳು ಪ್ರಕಟವಾಗಿವೆ. ಆದುದರಿಂದ ಶಾಸನಗಳಿಂದ ಲಭ್ಯವಾಗುವ ವಿವರಗಳನ್ನು ದಿಙ್ಮಾತ್ರ ಇಲ್ಲಿ ದಾಖಲಿಸಲಾಗಿದೆ.
ಕೆಲವು ಶಾಸನಗಳಲ್ಲಿ ಗದ್ದೆಯನ್ನು ದಾನವಾಗಿ ನೀಡಲಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಬತ್ತವನ್ನು ಬೆಳೆಯುವ ಭೂಮಿ ಎಂದು ಅಧ್ಯಾಹಾರ ಮಾಡಿಕೊಳ್ಳಬೇಕಾದ ಸಂದರ್ಭಗಳೂ ಉಂಟು {ಉದಾಹರಣೆಗೆ: ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ನೆಲಮಂಗಲ-೧, ಕಾಲ: ಕ್ರಿ.ಶ. ೧೦೨೯}. ಲೂಯಿ ರೈಸ್ ಅವರು ಇದೇ ರೀತಿ ಅರ್ಥೈಸಿದ್ದಾರೆ. ಶಾಸನಗಳಲ್ಲಿ ಕಾಡಾರಂಭ, ನೀರಾರಂಭ, ಗುಡಿ, ಗುಯ್ಯಲು, ಬಿತ್ತುವಟ, ತೋಟ, ತುಡಿಕೆ ಎಂಬ ಶಬ್ದಗಳು ದೊರಕುತ್ತವೆ. ಇವೆಲ್ಲವೂ ಮೂಲತಃ ಕೃಷಿಗೆ ಸಂಬಂಧಪಟ್ಟ ಶಬ್ದಗಳೇ ಆಗಿವೆ.
ತಲಕಾಡು ಗಂಗರ ಕಾಲದ ಕೆರೆಗಳಲ್ಲಿ, ಕ್ರಿ. ಶ. ೮೭೦ರಲ್ಲಿ ಸತ್ಯವಾಕ್ಯ ಪೆರ್ಮಾ[ನ]ಡಿಯ ಸಾಮಂತನಾದ ಕಲಿಯುಗದಣುಗ ನಾಗತ್ತರನ ಆಳು, ಇರ್ವ್ವಲಿಯೂರಿನ (ಇಂದಿನ ಸರ್ಜಾಪುರ ರಸ್ತೆಯ ಅಗರ ಸಮೀಪದ ಇಬ್ಬಲೂರು) ಒಡೆಯ, ಇರುಗಮಯ್ಯನ ಮಗ ಸಿರಿಯಮಯ್ಯ ಎಂಬವನು ಬೆಂಗಳೂರು ದಕ್ಷಿಣ ತಾಲ್ಲೂಕು ಅಗರದ ಬಳಿ ಮೂಡಣ ಕೆರೆಯೊಂದನ್ನು ಕಟ್ಟಿಸಿದ ವಿವರ ಹಾಗೂ ಅದಕ್ಕೂ ಮೊದಲೇ ಅಲ್ಲಿದ್ದ ಎರಡು ಕೆರೆಗಳಿಗೆ ತೂಬುಗಳನ್ನು ಇಡಿಸಿದ ವಿವರ ಶಾಸನದಲ್ಲಿ ದಾಖಲಾಗಿದೆ {ನೋಡಿ: ಬೆಂಪೂರೊಡೆಯ (=ಬೇಗೂರು) ನಾಗತ್ತರನ ಶಾಸನಗಳು – ಎಸ್. ಕರ‍್ತಿಕ್, ಸಂಶೋಧನ ಸಂಭಾವನೆ (ಇತಿಹಾಸ, ಹಸ್ತಪ್ರತಿ, ವಿಮರ್ಶೆ ವ್ಯಕ್ತಿಚಿತ್ರ ಸಂಬಂಧೀ ಬರಹಗಳು), ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು-೨೦೧೬, ಪುಟ ೭-೨೨}. ಇವುಗಳೇ ಬಲುಮಟ್ಟಿಗೆ ಬೆಂಗಳೂರಿನ ಪ್ರಾಚೀನ ಕೆರೆಗಳೆಂದು ಕಾಣುತ್ತದೆ. ಇವುಗಳಲ್ಲಿ ಅಗರದ ಕೆರೆ ಈಗಲೂ ಉಳಿದುಕೊಂಡಿದೆ.
ಕ್ರಿ.ಶ. ೧೨-೩-೧೨೪೭ ರ ಮಡಿವಾಳದ ಶಾಸನದಲ್ಲಿ ‘ವೆಂಗಳೂರು ಪಿರಿಯ ಕೆರೆ’ ಎಂಬ ಉಲ್ಲೇಖ ಕಂಡುಬರುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು-೬೮}. ಕನ್ನಡದ ಬ ತಮಿಳಿನಲ್ಲಿ ವ ಆಗುವುದರಿಂದ ವೆಂಗಳೂರು ಎಂಬ ರೂಪ ಬಳಕೆಯಾಗಿದೆ. ಶಾಸನಪಾಠ ಅಲ್ಲಲ್ಲಿ ತ್ರುಟಿತವಾಗಿದೆ. ವೆಂಗಳೂರ ಪಿರಿಯ ಕೆರೆ ಎಂದರೆ ಈಗ ಮಡಿವಾಳದ ಕೆರೆಯೆಂದು ಕರೆಯುವುದೇ ಆಗಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಆಧಾರಗಳು ಸಾಲವು.
ಕ್ರಿ.ಶ. ೧೦ನೆಯ ಶತಮಾನದ ಕೊನೆಕೊನೆಗೆ ಬೆಂಗಳೂರು ಜಿಲ್ಲಾ ಪ್ರದೇಶವು ಚೋಳರ ಆಳ್ವಿಕೆಗೆ ಒಳಪಟ್ಟಿತು. ಆಗಲೂ ಕೆರೆಗಳ ನಿರ್ಮಾಣಕಾರ್ಯ ಅವಿರತವಾಗಿ ಮುಂದುವರಿದಿರುವುದು ಕಂಡುಬರುತ್ತದೆ. ಸಣ್ಣೆನಾಡ ಗಾಮುಂಡನ ಮಗ ರಾಜರಾಜ ವೇಳಾನ್ ಎಂಬವನು ಪಟ್ಟಂದೂರು ಕೆರೆಯನ್ನು ಕಟ್ಟಿಸಿದ ವಿವರ ಕ್ರಿ.ಶ. ೧೦೪೩ರ ಚೋಳ ರಾಜೇಂದ್ರನ ಕಾಡುಗೋಡಿಯ ಶಾಸನದಲ್ಲಿ ಬಂದಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಹೊಸಕೋಟೆ -೧೪೨}.
ಹನ್ನೆರಡನೆಯ ಶತಮಾನದ ವೇಳೆಗೆ ಹೊಯ್ಸಳರ ಆಳ್ವಿಕೆ ಬೆಂಗಳೂರು ಜಿಲ್ಲಾ ಪ್ರದೇಶದ ಮೇಲೆ ನೆಲೆಗೊಂಡಿತು. ಹೊಯ್ಸಳರ ಮಹಾಮಂಡಳೇಶ್ವರರಾದ ಕಕ್ಕಡ ಮಹಾರಾಯರೂ ಪೂರ್ವಾಧಿರಾಯರೂ ಆನೇಕಲ್ ತಾಲ್ಲೂಕು ಪ್ರದೇಶದಲ್ಲಿ ಅನೇಕ ಕೆರೆಕಟ್ಟೆಗಳ ನಿರ್ಮಾಣ ಕಾರ್ಯವನ್ನು ಕೈಕೊಂಡ ವಿವರಗಳು ದೊರಕುತ್ತವೆ. ಕ್ರಿ.ಶ. ೧೨೬೫ರ ಹಂದೇನಹಳ್ಳಿ ಗ್ರಾಮದ ಶಾಸನವು ಮಂಡಲರಾಯ ತ್ರಿಭುವನಮಲ್ಲ ಕಕ್ಕ್ಕಡ ಮಹಾರಾಯನಿಂದ ಆ ಗ್ರಾಮದ ಕೆರೆ ರೂಪಗೊಂಡಿದೆ ಎಂದು ತಿಳಿಸುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಆನೇಕಲ್-೪೧}.
ತ್ರಿಭುವನಮಲ್ಲ ಪೂರ್ವಾದಿರಾಯ ಅಲ್ಲಾಳ ಪೆರುಮಾಳ್ ಎಂಬವನಿಗಾಗಿ ಸೋಮಗಾವುಂಡನ ಮದ್ಯೆಯನ್ನನ ಮಗ ವೈರವನ್ ಎಂಬವನು ಕೆರೆಯೊಂದನ್ನು ಕಟ್ಟಿಸಿದ ವಿವರ ಕ್ರಿ. ಶ. ೧೨೭೪ರ ಮಾಯಸಂದ್ರ ಗ್ರಾಮದ ಶಾಸನದಲ್ಲಿ ಬಂದಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಆನೇಕಲ್-೪೫}.
ಕ್ರಿ.ಶ. ೧೪-೧೧-೧೪೧೨ರ ಮಾಯಸಂದ್ರ ಶಾಸನದಲ್ಲಿ ತತ್ತನಕೆಱೆ, ಬೆಳ್ಳವಾರಣದ ಕೆಱೆಗಳ ಹೆಸರು ದಾಖಲಾಗಿದೆ {ನೋಡಿ : ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕು ಮಾಯಸಂದ್ರ ಶಾಸನದ ಪರಿಷ್ಕೃತ ಪಾಠ ಮತ್ತು ವಿಶ್ಲೇಷಣೆ-ಎಸ್. ಕರ‍್ತಿಕ್, ಸಂಶೋಧನ ಸಂಭಾವನೆ (ಇತಿಹಾಸ, ಹಸ್ತಪ್ರತಿ, ವಿಮರ್ಶೆ ವ್ಯಕ್ತಿಚಿತ್ರ ಸಂಬಂಧೀ ಬರಹಗಳು), ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು-೨೦೧೬, ಪುಟ ೩೬-೪೫}. ಈಗ ಇವುಗಳನ್ನು ಗುರುತಿಸುವುದೇ ಕಷ್ಟಕರವಾಗಿದೆ.
ಬೆಂಗಳೂರು ಪೂರ್ವತಾಲ್ಲೂಕಿನ ವಿಭೂತಿಪುರ ಗ್ರಾಮದ ಶಾಸನವು ಕ್ರಿ.ಶ. ೧೩೦೭ರಲ್ಲಿ ಮಾಸಂದಿನಾಡಿನ ಪಶ್ಚಿಮ ಭಾಗದ ಅಧಿಕಾರಿ ಸೆಂಬಿದೇವನ್, ನಾಡಗೌಡ ವಿಲ್ಲಗಾವುಂಡನ್ ಮುಂತಾದವರು ಸೇರಿ ಕಾಡನ್ನು ಕಡಿದು, ಮರಳನ್ನು ತೆಗೆದು, ಮಟ್ಟಮಾಡಿ ಕೆರೆಯೊಂದನ್ನು ರಚಿಸಿ, ಊರೊಂದನ್ನು ಕಟ್ಟಿ ಆ ಊರಿಗೆ ವಾಚ್ಚಿದೇವಪುರವೆಂದು ನಾಮಕರಣ ಮಾಡಿ, ವಾಚ್ಚಿದೇವ ಯತಿಗೆ ಮಡಪುರಂ ಅಂದರೆ ಪುರಧರ್ಮವಾಗಿ ದತ್ತಿಬಿಟ್ಟ ಸಂಗತಿಯನ್ನು ತಿಳಿಸುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು -೧೩೩}.
ಕ್ರಿ.ಶ. ೧೩೧೦ರಲ್ಲಿ ಹೊಯ್ಸಳ ಮೂರನೆಯ ವೀರಬಲ್ಲಾಳನ ಸಾಮಂತಾಧಿಪತಿಯಾದ ನರಲೋಕಗಂಡ ಮಯಿಲೆಯ ನಾಯಕರ ಸೋದರ ಚೆಂನಯ ನಾಯಕನು ಮೂರು ಸಾವಿರ ಹೊನ್ನನ್ನು ವೆಚ್ಚಮಾಡಿ “ರಾಮಸಮುದ್ರ’ ಎಂಬ ಕೆರೆಯನ್ನು ಕಟ್ಟಿಸಿದ. ಈ ಶಾಸನದಲ್ಲಿ ಭೂತಳದಲ್ಲಿರುವ ನರ, ಮೃಗ, ಪಶುಪಕ್ಷಿ ಮೊದಲಾದವು ಸಾಯುವುದನ್ನು ತಡೆಯಲು ಸದಾ ಲೋಕವು ಗಂಗಾದೇವಿಯ ಅಂದರೆ ನೀರಿನ ಆವಲಂಬನೆಯಲ್ಲಿರಲು ಈ ಕೆರೆಯನ್ನು ಕಟ್ಟಿಸಿರುವ ಸಂಗತಿ ದಾಖಲಾಗಿದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಬೆಂಗಳೂರು – ೧೧೧}.
ಹೊಸಕೋಟೆಯ ತಾಮ್ರಶಾಸನವೊಂದರಲ್ಲಿ (ಕ್ರಿ.ಶ. ೨-೧೧-೧೬೯೩) ಸುಗುಟೂರು ಪಾಳೆಯಗಾರ ಮುಮ್ಮಡಿ ಚಿಕ್ಕರಾಯ ಚಿಕ್ಕತಮ್ಮೇಗೌಡನು ಭೂದಾನದ ಜೊತೆಗೆ ನೆಲ್ಲು, ರಾಗಿ ಮತ್ತು ಹಣದ ರೂಪದಲ್ಲಿ ವಾರ್ಷಿಕ ವರಮಾನ ಬರುವಂತೆ ಉದಾರವಾದ ದತ್ತಿ ಬಿಟ್ಟಿರುವ ಉಲ್ಲೇಖ ದೊರಕುತ್ತದೆ {ಎಪಿಗ್ರಾಫಿಯಾ ಕರ್ಣಾಟಿಕಾ, ಸಂಪುಟ-೯ (ರೈಸ್ ಆವೃತ್ತಿ), ಹೊಸಕೋಟೆ-೧೦೫}. ಈ ಉಲ್ಲೇಖವು ಆಗ ಬೆಳೆಯುತ್ತಿದ್ದ ಬೆಳೆಗಳನ್ನು ಕುರಿತು ಹೇಳುತ್ತಿರುವಂತಿದೆ ಎಂಬ ಅಂಶ ಸಂಭಾವ್ಯವಾದ್ದು.
ವಿಜಯನಗರ ಸಾಮ್ರಾಜ್ಯದ ಅರಸರು ಮತ್ತು ಅಧಿಕಾರಿಗಳು ಬಹಳವಾಗಿ ಕೆರೆ, ಕಟ್ಟೆಗಳ ನರ‍್ಮಾಣಕ್ಕೆ ಪ್ರೋತ್ಸಾಹ ನೀಡಿದರು. ಸಾಮಂತ ಅರಸರು, ಪಾಳೆಯಗಾರರು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಅಷ್ಟೇ ಗಮನಾರ್ಹ ಸಂಗತಿಯಾಗಿದೆ.