ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ “ಕನ್ನಡದಲ್ಲೂ ಐಎಎಸ್ ಬರೆಯಿರಿ” ಅಭಿಯಾನದಡಿ ಐಎಎಸ್–ಐಪಿಎಸ್ ಹಾಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ವಿಶೇಷ ಮಾಹಿತಿ ಕಾರ್ಯಗಾರವನ್ನು ಆನೆ ಮಜಲಿನ ನೂತನ ನ್ಯಾಯಾಲಯದ ವಕೀಲರ ಭವನದಲ್ಲಿ ಆಯೋಜಿಸಲಾಯಿತು.

ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪುತ್ತೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್–ಐಪಿಎಸ್ ಅಧಿಕಾರಿಗಳು ಹೊರಹೊಮ್ಮಬೇಕು ಹಾಗೂ ನ್ಯಾಯವಾದಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಪ್ರಕೃತಿ ಕಲ್ಯಾಣಪುರ, ಇಂತಹ ಕಾರ್ಯಗಾರಗಳು ಓದುವ ಶಿಸ್ತು, ಸ್ಪರ್ಧಾತ್ಮಕ ಮನೋಭಾವ ಹಾಗೂ ಗುರಿನಿಷ್ಠತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ನ್ಯಾಯವಾದಿಗಳು ತಮ್ಮ ವೃತ್ತಿಜೀವನದಲ್ಲಿ ಮಾತ್ರ ಸೀಮಿತವಾಗದೆ ಆಡಳಿತ ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಶಿವಣ್ಣ ಎಚ್.ಆರ್ ಕನ್ನಡದಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶವಿದ್ದು, ನ್ಯಾಯವಾದಿಗಳು ತಮ್ಮ ಅಧ್ಯಯನ ಸಾಮರ್ಥ್ಯವನ್ನು ಆಡಳಿತ ಕ್ಷೇತ್ರದಲ್ಲಿಯೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಐಎಎಸ್ ದರ್ಶನದ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಸ್ಪರ್ಧಾತ್ಮಕ ಪರೀಕ್ಷೆಗಳ ರೂಪರೇಖೆ, ತಯಾರಿ ವಿಧಾನ, ಸಮಯ ನಿರ್ವಹಣೆ ಹಾಗೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ದರ್ಶನ್ ಗರ್ತಿಕೆರೆ ಅವರನ್ನು ಶ್ರೀಮತಿ ಸರಿತಾ ಡಿ ಅವರು ವಕೀಲರ ಸಂಘದ ಪರವಾಗಿ ಸನ್ಮಾನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಮಾತನಾಡಿ, ನ್ಯಾಯವಾದಿಗಳಿಗಾಗಿ ಐಎಎಸ್–ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಹಮ್ಮಿಕೊಂಡಿರುವ ಈ ಕಾರ್ಯಗಾರ ರಾಜ್ಯದಲ್ಲೇ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ. ಸ್ವಾಗತಿಸಿದರು. ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕ ನುಡಿಗಳಾಡಿದರು. ಗೌರವ ಕೋಶಾಧ್ಯಕ್ಷ ಡಾ. ಹರ್ಷಕುಮಾರ್ ರೈ ವಂದಿಸಿದರು. ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕೃತಿ ಪ್ರಾರ್ಥಿಸಿದರು. ಖಜಾಂಜಿ ಮಹೇಶ್ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ರಸಾದ್ ನಡ್ಸಾರ್ ಕಾರ್ಯಕ್ರಮದ ಸಂಯೋಜನೆ ಮಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಜಯಾನಂದ ಕೆ., ಎಂ.ಪಿ. ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯುವ ನ್ಯಾಯವಾದಿಗಳು ಹಾಗೂ ಕಾನೂನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.ಆನೆ ಮಜಲಿನ ನೂತನ ನ್ಯಾಯಾಲಯದ ವಕೀಲರ ಭವನದಲ್ಲಿ ನಡೆದ ಮೊದಲ ಕಾರ್ಯಕ್ರಮವಾಗಿರುವುದೂ, ಪುತ್ತೂರಿನಲ್ಲಿ ಸೇವೆ ಸಲ್ಲಿಸಿದ ದರ್ಶನ್ ಗರ್ತಿಕೆರೆ ಅವರ ಈ ಅವಧಿಯ ಕೊನೆಯ ಕಾರ್ಯಗಾರವಾಗಿರುವುದೂ ಕಾರ್ಯಕ್ರಮದ ವಿಶೇಷತೆಯಾಗಿತ್ತು.





















