ಪುತ್ತೂರು: ವಕೀಲರ ಸಂಘ ಪುತ್ತೂರು ಇದರ ವತಿಯಿಂದ ಡಿ. 3ರಂದು ವಕೀಲರ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ವಕೀಲ ಎಂ ರಾಮ್ ಮೋಹನ್ ರಾವ್ ಮಾತನಾಡಿ, ವಕೀಲರು ಸಂಘಟಿತರಾಗಿ ಕೆಲಸ ಮಾಡಬೇಕು. ಯಾವುದೇ ವಕೀಲರಿಗೆ ತೊಂದರೆಗಳು ಉಂಟಾದಾಗ ಎಲ್ಲಾ ವಕೀಲರು ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಶಕ್ತಿ ನಮ್ಮಲ್ಲಿ ಬೆಳೆಯಬೇಕು. ಇತ್ತೀಚಿನ ದಿನಗಳಲ್ಲಿ ಯುವ ವಕೀಲರ ಸಂಖ್ಯೆ ಹೆಚ್ಚಾಗಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಕೀಲ ಪಿ ಕೆ ಸತೀಶನ್ ಮಾತನಾಡಿ, ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಅತ್ಯಂತ ಖುಷಿಯನ್ನು ಕೊಟ್ಟಿದೆ. ವಕೀಲರ ಕರ್ತವ್ಯ ಮತ್ತು ಜವಾಬ್ಧಾರಿಗಳ ಬಗ್ಗೆ ತಿಳಿಸಿ ಹೆಚ್ಚಿನ ವಕೀಲರು ವಕೀಲ ವೃತ್ತಿಗೆ ಹೆಚ್ಚು ಆಧ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ ಮಾತನಾಡಿ, ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸತ್ಯ, ನ್ಯಾಯ ಮತ್ತು ಮಾನವೀಯತೆಯ ಸೇವೆ. ನ್ಯಾಯಾಲಯವೆಂಬ ಜಗತ್ತಿನಲ್ಲಿ ನಮ್ಮ ಮಾತು, ನಮ್ಮ ಬರಹ, ನಮ್ಮ ಮನೋಭಾವ ಒಬ್ಬರ ಜೀವನವೇ ಬದಲಾಯಿಸಬಲ್ಲದು. ಆದ್ದರಿಂದ, ನಮ್ಮ ವೃತ್ತಿಯನ್ನು ಗೌರವಿಸೋಣ, ನ್ಯಾಯದ ಪಥದಲ್ಲಿ ಸದಾ ನೇರವಾಗಿ ನಡೆಯೋಣ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ, ಪ್ರದಾನ ಕಾರ್ಯದರ್ಶಿ ಚಿನ್ಮಯಿ ರೈ, ಕೋಶಾಧಿಕಾರಿ ಮಹೇಶ್ ಕೆ ಸವಣೂರು, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಹಿರಿಯ ಸದಸ್ಯರಾದ ಎಂ ರಾಮ ಮೋಹನ್ ರಾವ್ ಮತ್ತು ಪಿ ಕೆ ಸತೀಶನ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮಹಿಳಾ ವಕೀಲರುಗಳನ್ನು ವಿಶೇಷವಾಗಿ ಗೌರವಿಸಲಾಯಿತು. ವಕೀಲರ ದಿನಾಚರಣೆಯ ಅಂಗವಾಗಿ ಕೇಕ್ ಮತ್ತು ಸಿಹಿ ತಿಂಡಿ ವಕೀಲರಿಗೆ, ನ್ಯಾಯಾಧೀಶರುಗಳಿಗೆ, ನ್ಯಾಯಾಲಯದ ಸಿಬ್ಬಂದಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಕೆ, ಹಿರಿಯ ವಕೀಲರಾದ ಎಸ್ ಪ್ರವೀಣ್ ಕುಮಾರ್, ಜಯನಂದ ಕೆ ಮೊದಲಾದವರು ಭಾಗವಹಿಸಿದ್ದರು.

























