ಪುತ್ತೂರು: ಪರಮೋಚ್ಚ ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆಯಲು ಪ್ರಯತ್ನ ಬಹಳಷ್ಟು ಆತಂಕಕಾರಿಯಾಗಿದೆ. ಚಪ್ಪಲಿ ಎಸೆದಾತ ನ್ಯಾಯವಾದಿಯಾಗಿದ್ದು, ತನ್ನ ಪ್ರತಿರೋಧಕ್ಕೆ ಇತರ ನ್ಯಾಯಿಕ ಮಾರ್ಗವನ್ನು ಅನುಸರಿಸದೆ, ಹಿಂಸಾತ್ಮಕ ಮತ್ತು ಅತ್ಯಂತ ನೀಚ ಮಾರ್ಗ ಅನುಸರಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕ್ರಿಶ್ಚನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮೌರೀಸ್ ಮಸ್ಕರೇನಿಯಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳು ಯಾವುದೇ ರಾಜಕೀಯ ಪಕ್ಷದ ಜತೆ ಸಂಬಂಧ ಹೊಂದಿರುವುದಿಲ್ಲ. ಆದರೆ ರಾಜಕೀಯ ಪಕ್ಷ ಒಂದರ ಬೆಂಬಲಿಗರು ಇದನ್ನು ಖಂಡಿಸುವ ಬದಲು ಬೆಂಬಲಿಸುತ್ತಿದ್ದಾರೆ. ಕೃತ್ಯ ಎಸಗಿದ ದುಷ್ಕರ್ಮಿಯ ಹಿಂದಿನ ಸೂತ್ರದಾರರು ಯಾರು? ದೇಶದ ಅಮಾಯಕ ಜನರ ತಲೆಯಲ್ಲಿ ಮನುಷ್ಯ ವಿರೋಧಿ ಮನಸ್ಥಿತಿ ತುಂಬುತ್ತಿರುವವರು ಯಾರು? ಎಂದು ಪ್ರಶ್ನಿಸಿದ ಅವರು ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಖಂಡನೀಯವಾಗಿದೆ. ನ್ಯಾಯಮೂರ್ತಿ ಗವಾಯಿಯವರ ಬೆನ್ನಿಗೆ ದೇಶದ ಪ್ರಜ್ಞಾವಂತ ಜನರು ಗಟ್ಟಿಯಾಗಿ ನಿಲ್ಲಬೇಕಿದೆ. ಡಾ. ರಾಕೇಶ್ ಕಿಶೋರ್‌ರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚನ್ ಯೂನಿಯನ್ ಗೌರವ ಸಲಹೆಗಾರ ಜೆರೋನಿಯಸ್ ಪಾಯಸ್, ಉಪಾಧ್ಯಕ್ಷ ವಾಲ್ಟರ್ ಡಿಸೋಜ, ನಿಯೋಜಿತ ಅಧ್ಯಕ್ಷ ಜೋಕಿಂ ಲೂಯಿಸ್, ಸದಸ್ಯ ವಲೇರಿಯನ್ ಡಿಸೋಜ ಉಪಸ್ಥಿತರಿದ್ದರು.