ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್’ನ ಮನೆ – ಮನ ಕಾರ್ಯಕ್ರಮ ಮಂಗಳವಾರ ಸಂಜೆ ಡಾ. ರಾಜೇಶ್ ಬೆಜ್ಜಂಗಳ ಅವರ ನಂದಿಲದ ಮನೆಯಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ, ಫೆರಾರಿ ಮಾರಿದ ಪಕೀರ ಪುಸ್ತಕ ಖ್ಯಾತಿಯ ರಾಬೀನ್ ಶರ್ಮಾ ಅವರ ಬದುಕು ಹಾಗೂ ಚಿಂತನೆಗಳ ಬಗ್ಗೆ ಮಾತನಾಡಿದ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ, ನಾವು ನಮ್ಮ ಬಗ್ಗೆ ತಿಳಿದುಕೊಂಡಿರುವುದಕ್ಕಿಂತಲೂ, ನಮ್ಮ ಬದುಕು ಮೇಲ್ಮಟ್ಟದಲ್ಲಿರುತ್ತದೆ ಎಂಬ ರಾಬೀನ್ ಶರ್ಮಾ ಮಾತನ್ನು ಉಲ್ಲೇಖಿಸುತ್ತಾ, ಉಗಾಂಡ ಮೂಲದ ಕೆನಡಿಯನ್ ಬರಹಗಾರನಿಗೆ ಭಾರತದ ನಂಟು ಹೊಂದಿದ್ದಾನೆ. ಹಿಮಾಲಯದ ಸನ್ಯಾಸಿಗಳ ಚಿಂತನೆಗಳು ರಾಬಿನ್ ಶರ್ಮಾ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದೆ ಎನ್ನುವುದನ್ನು ಆತ ತಿಳಿಸುತ್ತಾನೆ. ನಮ್ಮ ಬದುಕಿನಲ್ಲಿ ದೌರ್ಬಲ್ಯಗಳು ನಮ್ಮನ್ನು ಆಳುವಂತಾಗಬಾರದು. ನಿಜವಾದ ಆಂತರಿಕ ಶಕ್ತಿಯನ್ನು ಅರ್ಥ ಮಾಡಿಕೊಂಡು ಸವಾಲುಗಳನ್ನು ಎದುರಿಸುತ್ತಾ, ಸದಾ ಅನ್ವೇಷಕನಾಗಿದ್ದಲ್ಲಿ ಬದುಕು ಸಾರ್ಥಕ್ಯ ಪಡೆಯುತ್ತದೆ. ಸಾಮಾನ್ಯರಿಗಿಂತ ವಿಶೇಷವಾಗಿ ಬದುಕಲು ಮತ್ತು ಬದುಕಿನ ನಿಜವಾದ ಅರ್ಥವನ್ನು ಸಾಧಿಸಲು ಸಹಾಯಕವಾಗುತ್ತದೆ ಎನ್ನುವುದೇ ರಾಬಿನ್ ಶರ್ಮಾ ಅವರ ಚಿಂತನೆಗಳು ಎಂದರು.
ನಿಯೋಜಿತ ಅಧ್ಯಕ್ಷ ಚಂದ್ರಹಾಸ ರೈ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲೂ ಸವಾಲುಗಳು ಸಹಜ. ಸವಾಲುಗಳಿಂದ ಹೊರ ಬರಲು ಕೆಲವೊಮ್ಮೆ ಆಮೆಗಳಂತೆ ನಮ್ಮನ್ನು ನಾವು ಒಳಗೆ ಎಳೆದುಕೊಳ್ಳುತ್ತಾ, ಸ್ವ-ರಕ್ಷಣೆಯ ಜೊತೆ ಮುಂದುವರಿದರೆ ಸವಾಲುಗಳನ್ನು ಎದುರಿಸಿ ಆಮೆಯ ಚಿಪ್ಪಿನಂತೆ ಗಟ್ಟಿಯಾಗಲು ಸಾಧ್ಯ ಎಂದರು.
ಕ್ಲಬ್ ಅಧ್ಯಕ್ಷ ಅಶ್ರಫ್ ಮುಕ್ವೆ ಅಧ್ಯಕ್ಷತೆ ವಹಿಸಿದ್ದರು. ಪದ್ಮನಾಭ ಶೆಟ್ಟಿ, ಶಿವರಾಮ ಎಂ.ಎಸ್., ಸಂತೋಷ್ ಕುಮಾರ್ ಶೆಟ್ಟಿ, ಜಯಪ್ರಕಾಶ್, ಜಗನ್ನಾಥ್ ಅರಿಯಡ್ಕ, ಡಾ. ರಾಮಚಂದ್ರ, ನವೀನ್ ಚಂದ್ರ ನಾಯ್ಕ್, ಸನತ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ವಸಂತ ಶಂಕರ್ ವಂದಿಸಿದರು. ಹರ್ಷಿತಾ ಬೆಜ್ಜಂಗಳ, ವಿಖ್ಯಾತಿ ಬೆಜ್ಜಂಗಳ ಸಹಕರಿಸಿದರು.