ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ
ಕಿರುಕುಳಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳುಹಿಸಿತ್ತು. ಇದೀಗ ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ.
ಸರ್ಕಾರ ಕಳುಹಿಸಿರುವ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆ ಹೋಟ್ ಸಹಿ ಮಾಡದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಸುಗ್ರಿವಾಜ್ಞೆಯಲ್ಲಿ ಕೆಲವು ದೋಷಗಳು ರಾಜ್ಯಪಾಲರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಿ, ಸ್ಪಷ್ಟನೆ ಕೇಳಿದ್ದಾರೆ.
ರಾಜ್ಯಪಾಲರು ಕೇಳಿದ ಪ್ರಶ್ನೆಗಳು..
ದಂಡ ಮತ್ತು ಶಿಕ್ಷೆಯ ಪ್ರಮಾಣದ ವಿಚಾರದಲ್ಲಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಿದ್ದಾರೆ. ಸುಗ್ರಿವಾಜ್ಞೆಯಲ್ಲಿ ಸಾಲ ಪಡೆದವರ ಬಗ್ಗೆ ಮಾತ್ರ ಗಮನ ನೀಡಲಾಗಿದೆ. ಹಾಗಾದರೆ ಸಾಲ ನೀಡಿದವರ ಕತೆ ಏನು? ಸಾಲ ಕೊಟ್ಟವರಿಗೂ ನ್ಯಾಯ ಸಿಗಬೇಕಲ್ವವೇ? ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದೆ ರಾಜ್ಯಪಾಲರು ಇಟ್ಟಿದ್ದಾರೆ.
ಮೈಕ್ರೋ ಫೈನಾನ್ಸ್‌ಗಳು ಮೂರು ಲಕ್ಷಕ್ಕಿಂತ ಹೆಚ್ಚು ಸಾಲವನ್ನು ಕೊಡೋದಿಲ್ಲ ಅನ್ನೋದು ಸರ್ಕಾರ ಗಮನಿಸಿರುವ ಅಂಶ. ಹೀಗಿರುವಾಗ ಮೂರು ಲಕ್ಷಕ್ಕೆ ಕಿರುಕುಳ ನೀಡಿದವರಿಗೆ ಐದು ಲಕ್ಷದವರೆಗೆ ಹೇಗೆ ದಂಡ ವಿಧಿಸುತ್ತೀರಿ ಅನ್ನೋದ್ರ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಶಿಕ್ಷೆಯ ಪ್ರಮಾಣದಲ್ಲಿ ಯಾವುದೇ ತರ್ಕ ಇಲ್ಲ. 10 ವರ್ಷ ಜೈಲು ಶಿಕ್ಷೆಗೆ ಲಾಜಿಕ್ ಇಲ್ಲ.
ಸರ್ಕಾರಕ್ಕೆ ಮತ್ತೆ ತಲೆನೋವು..
ಸರ್ಕಾರ ಎಚ್ಚರಿಕೆ ನೀಡಿ, ಸುಗ್ರಿವಾಜ್ಞೆ ಹೊರಡಿಸಿದ್ದರೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆಗುತ್ತಿರುವ ಅನಾಹುತಗಳು ಮಾತ್ರ ನಿಲ್ಲುತ್ತಿಲ್ಲ. ಇದೀಗ ರಾಜ್ಯಪಾಲರು ಸುಗ್ರಿವಾಜ್ಞೆಗೆ ಸ್ಪಷ್ಟನೆ ಕೇಳಿರೋ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತೆ ತಲೆನೋವು ಹೆಚ್ಚಾಗಿದೆ. ಯಾಕೆಂದರೆ, ಮುಂದಿನ ಅಧಿವೇಶನದಲ್ಲಿ ಅದರ ಸಾಧಕ ಮತ್ತು ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುವ ನಿರ್ಧಾರ ಮಾಡಬೇಕಿದೆ.
ಅಲ್ಲದೇ ರಾಜ್ಯಪಾಲರು ಅನುಮಾನ ವ್ಯಕ್ತಪಡಿಸಿರುವ ಕೆಲವು ಪ್ರಶ್ನೆಗಳಿಗೆ ಸರ್ಕಾರ ಸರಿಯಾದ ಉತ್ತರ ನೀಡಿ ಮತ್ತೊಮ್ಮೆ ಸುಗ್ರಿವಾಜ್ಞೆಗೆ ಸಹಿ ಹಾಕುವಂತೆ ಮನವಿ ಕೂಡ ಮಾಡಬಹುದು. ಆದರೆ ರಾಜ್ಯಪಾಲರು ಸಹಿ ಹಾಕದೇ ವಾಪಸ್ ಕಳುಹಿಸಿರೋದು ಸಿದ್ದರಾಮಯ್ಯ ಸರ್ಕಾರಕ್ಕೆ ಹಿನ್ನೆಡೆ ಆದಂತೆ ಆಗಿದೆ.