ಚಿಕ್ಕಬಳ್ಳಾಪುರ: ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ನಡೆದಿದೆ. ಎನ್‌ಎಲ್ 01, ಎಎಫ್ 2743 ಕಂಟೈನರ್ ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನವಾಗಿದೆ. ಸದ್ಯ ಪೆರೇಸಂದ್ರೆ ಠಾಣೆ ಪೊಲೀಸರು ಖಾಲಿ ಕಂಟೇನರ್ ವಶಕ್ಕೆ ಪಡೆದುಕೊಂಡಿದ್ದಾರೆ.
ನ. 22ರಂದು ಕಂಟೈನರ್ ಒಂದರಲ್ಲಿ 3 ಕೋಟಿ ರೂ. ಮೌಲ್ಯದ ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್ ಗಳನ್ನು ತುಂಬಿಕೊಂಡು ದೆಹಲಿಯಿಂದ ಬೆಂಗಳೂರಿನತ್ತ ಹೊರಟಿದ್ದ ಕಂಟೈನರ್ ಸಕಾಲಕ್ಕೆ ಬೆಂಗಳೂರಿಗೆ ತಲುಪಲಿಲ್ಲ.ಹಾಗಾಗಿ ಅನುಮಾನಗೊಂಡ ಕಂಪನಿಯ ಅಧಿಕಾರಿಗಳು ಕಂಟೈನರ್ ಜಿ.ಪಿ.ಎಸ್ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿದ್ದು ಗೊತ್ತಾಗಿದೆ. ಕಂಟೈನರ್ ಪರಿಶೀಲನೆ ನಡೆಸಿದಾಗ ಅದರಲ್ಲಿದ್ದ 3 ಕೋಟಿ ರೂ. ಮೌಲ್ಯದ ಮೊಬೈಲ್‌ಗಳು ಕಾಣೆಯಾಗಿದ್ದು, ಕಂಟೈನರ್ ಚಾಲಕನೂ ನಾಪತ್ತೆಯಾಗಿದ್ದಾನೆ.
ಸೇಫ್ ಸ್ಪೀಡ್ ಕ್ಯಾರಿಯರ್ಸ್ ಪ್ರೈ. ಲಿಮಿಟೆಡ್ ಕಂಪನಿ ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್‌ಗಳನ್ನು ಸಾಗಾಟ ಹೊಣೆ ಹೊತ್ತಿತ್ತು. ಇದೇ ಕಂಪನಿಯಲ್ಲಿ ರಾಹುಲ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಲಾರಿ ಪತ್ತೆಯಾದರು ಚಾಲಕ ನಾಪತ್ತೆಯಾಗಿದ್ದು, ಸದ್ಯ ಪೊಲೀಸರು ಚಾಲಕನ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.