ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಬಡವರು ಬಲಿಯಾದ ಘಟನೆಯು ಆಕಸ್ಮಿಕವಲ್ಲ, ಅದೊಂದು ‘ಉದ್ದೇಶಪೂರ್ವಕ ಕೊಲೆ’ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕ ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ತಿನಲ್ಲಿ ಗುಡುಗಿದ್ದಾರೆ.
ಘಟನೆಯ ಕುರಿತು ಸದನದಲ್ಲಿ ಗಮನ ಸೆಳೆದು ಮಾತನಾಡಿದ ಅವರು, ಅರಣ್ಯ ಇಲಾಖೆ ಮತ್ತು ಗೃಹ ಇಲಾಖೆಯ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. “ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದೇವೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, 10 ಲಕ್ಷ ಕೊಟ್ಟ ತಕ್ಷಣ ಆ ಹೋದ ಜೀವ ವಾಪಸ್ ಬರುತ್ತದೆಯೇ? ಆ ಬಡ ಕುಟುಂಬದ ಆಕ್ರಂದನಕ್ಕೆ ಬೆಲೆ ಇಲ್ಲವೇ? ಮೃತರ ಕುಟುಂಬಕ್ಕೆ ಶಾಶ್ವತ ಪರಿಹಾರ ಹಾಗೂ ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರ ತಕ್ಷಣವೇ ಮಾಡಬೇಕು” ಎಂದು ಆಗ್ರಹಿಸಿದರು.
ಸೊಂಟದ ಕೆಳಗೆ ಗುಂಡು ಹಾರಿಸಬೇಕಿತ್ತು:
“ಅವರು ಬೇಟೆಯಾಡಲು ಹೋಗಿದ್ದರು, ಮಾಂಸ ಸಿಕ್ಕಿದೆ ಎಂದೇ ಇಟ್ಟುಕೊಳ್ಳೋಣ. ಆದರೆ, ಹಾಗೆಂದ ಮಾತ್ರಕ್ಕೆ ನೇರವಾಗಿ ಎದೆಗೆ ಗುಂಡು ಹಾರಿಸಿ ಸಾಯಿಸುವ ಹಕ್ಕು ಅರಣ್ಯ ಇಲಾಖೆಗೆ ಇದೆಯೇ? ಅವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ಕೊಡಿಸಬಹುದಿತ್ತು, ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಸೊಂಟದ ಕೆಳಗೆ ಗುಂಡು ಹಾರಿಸಬಹುದಿತ್ತು. ಆದರೆ, ಇದು ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿರುವ ಉದ್ದೇಶಪೂರ್ವಕ ಹತ್ಯೆಯಾಗಿದೆ. ತಪ್ಪು ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಪತ್ತೆ ಹಚ್ಚಿ ನೇರವಾಗಿ ಜೈಲಿಗೆ ಕಳುಹಿಸುವ ಕೆಲಸವನ್ನು ಅರಣ್ಯ ಸಚಿವರು ಮಾಡಬೇಕು” ಎಂದು ಕಟ್ಟುನಿಟ್ಟಾಗಿ ಒತ್ತಾಯಿಸಿದರು.
ರೈತರಿಗೆ ಕಿರುಕುಳ, ಇಲಾಖೆಯಲ್ಲಿ ತಂತ್ರಜ್ಞಾನದ ಕೊರತೆ:
“ಒಂದು ಕಡೆ ಆನೆ, ಕಾಡುಹಂದಿಗಳ ಕಾಟದಿಂದ ಬೆಳೆ ಮತ್ತು ಜೀವ ರಕ್ಷಿಸಿಕೊಳ್ಳಲು ರೈತರು ಇಟ್ಟುಕೊಂಡಿರುವ ಸುಮಾರು 15,000 ಲೈಸೆನ್ಸ್ ಇರುವ ಕೋವಿಗಳನ್ನು (ಬಂದೂಕು) ಸರ್ಕಾರ ರಿನಿವಲ್ ಮಾಡಿಕೊಡುತ್ತಿಲ್ಲ, ರೈತರಿಗೆ ಕಿರುಕುಳ ನೀಡುತ್ತಿದೆ. ಇನ್ನೊಂದೆಡೆ, ಅರಣ್ಯ ಇಲಾಖೆಯ ಸಿಬ್ಬಂದಿಗೆ ಡ್ರೋನ್, ನೈಟ್ ವಿಜನ್ ಕ್ಯಾಮೆರಾಗಳಂತಹ ಆಧುನಿಕ ತಂತ್ರಜ್ಞಾನವನ್ನು ಸರ್ಕಾರ ಒದಗಿಸಿಲ್ಲ. ಸರಿಯಾದ ತರಬೇತಿಯೂ ಇಲ್ಲದೆ, ಕಾಡಿನಲ್ಲಿ ಯಾರು ಓಡಾಡುತ್ತಿದ್ದಾರೆ ಎಂದು ತಿಳಿಯದೆ ಮನಬಂದಂತೆ ಗುಂಡು ಹಾರಿಸುವ ದುಸ್ಥಿತಿಗೆ ಅರಣ್ಯ ಇಲಾಖೆ ತಲುಪಿದೆ” ಎಂದು ಕಿಶೋರ್ ಕುಮಾರ್ ಕಿಡಿಕಾರಿದರು.
“ಎನ್‌ಕೌಂಟರ್ ನಡೆದ ಬಳಿಕ ಆಕ್ರೋಶಗೊಂಡ ಜನರು 9 ವಸತಿಗೃಹಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದರೆ, ನಮ್ಮ ಗೃಹ ಇಲಾಖೆ ಮತ್ತು ಅರಣ್ಯ ಇಲಾಖೆ ಎಷ್ಟು ಕಂಗಾಲಾಗಿವೆ ಮತ್ತು ಕಾನೂನು ಸುವ್ಯವಸ್ಥೆ ಎಷ್ಟು ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು” ಎಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಆಗ್ರಹಿಸಿದ್ದಾರೆ.


































