ಬ್ರೆಡ್ ತರಲು ಹೋಗಿದ್ದ ಬಾಲಕನೊಬ್ಬನಿಗೆ ಸಾಕು ನಾಯಿಯೊಂದು ಕಚ್ಚಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಈ ಘಟನೆ ನಡೆದಿದೆ. ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ವಾಸವಿರುವ 11 ವರ್ಷದ ಬಾಲಕ ಬ್ರೆಡ್ ತರುವುದಕ್ಕಾಗಿ ಮನೆಯಿಂದ ಹೊರಹೋಗಿದ್ದ. ಸ್ವಲ್ಪ ದೂರ ಹೋಗ್ತಿದ್ದಂತೆ ರಸ್ತೆಯಲ್ಲಿ ತನ್ನ ಮಾಲೀಕರೊಂದಿಗೆ ವಾಕ್ ಮಾಡ್ತಿದ್ದ ಶ್ವಾನವೊಂದು ದಾಳಿ ಮಾಡಿದೆ. ಬಾಲಕನ ತೊಡೆಗೆ ನಾಯಿ ಕಚ್ಚಿ ಗಾಯಗೊಳಿಸಿದೆ.
ಘಟನೆ ಸಂಭವಿಸಿದರೂ ಶ್ವಾನದ ಮಾಲೀಕರು ಬಾಲಕನಿಗೆ ಚಿಕಿತ್ಸೆ ಕೂಡ ಕೊಡಿಸಿರಲಿಲ್ಲ. ಹೀಗಾಗಿ, ಕುಟುಂಬಸ್ಥರೇ ಚಿಕಿತ್ಸೆ ವೆಚ್ಚ ಭರಿಸಿದ್ದರು. ಇದೀಗ ಬಾಲಕನ ಪೋಷಕರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಯಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಿಯ ಮಾಲೀಕನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.























