ಸುಬ್ರಹ್ಮಣ್ಯ: ಸೆ. 7ರಂದು ಚಂದ್ರಗ್ರಹಣ ಇರುವುದರಿಂದ ಅಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿತ್ಯದ ಸೇವೆ ಮತ್ತು ದರ್ಶನ ಹಾಗೂ ಭಕ್ತರ ಸೇವಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 11 ಕ್ಕೆ ನಡೆಯಲಿದೆ. ರಾತ್ರಿಯ ಮಹಾಪೂಜೆಯು ಸಂಜೆ 5 ಕ್ಕೆ ನೆರವೇರಲಿದೆ. ಸೆ. 7ರ ರಾತ್ರಿ ಭೋಜನ ಪ್ರಸಾದ ಹಾಗೂ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ಇರುವುದಿಲ್ಲ.
ಶನಿವಾರ ಆರಂಭಗೊಂಡ ಸರ್ಪ ಸಂಸ್ಕಾರ ಸೇವೆಯು ರವಿವಾರ ಕೊನೆಗೊಳ್ಳಲಿದ್ದು, ರವಿವಾರ ಸೇವೆ ಆರಂಭಿಸುವುದಿಲ್ಲ. ಸಂಜೆ 5 ರಿಂದ ಶ್ರೀ ದೇವರ ದರ್ಶನ ಹಾಗೂ ಸೆ. 8 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ.
ಆ. 31: ದರ್ಶನ ಸಮಯದ ವ್ಯತ್ಯಯ: ಆ. 31ರಂದು ಹೊಸ್ತಾರೋಗಣೆ (ನವಾನ್ನ ಭೋಜನ) ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ದರ್ಶನ ಮತ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಆ. 31ರ ರವಿವಾರ ಪ್ರಾತಃಕಾಲ 5.15ಕ್ಕೆ ದೇವರಿಗೆ ಮಹಾಭಿಷೇಕ ನೆರವೇರಲಿದೆ. ಬೆಳಗ್ಗೆ 7.30ಕ್ಕೆ ತೆನೆ ತರುವುದು ಮತ್ತು ಕದಿರು ಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ಕದಿರು ವಿತರಣೆ ನೆರವೇರಲಿದೆ.
ಹೊಸ್ತಾರೋಗಣೆ ನಿಮಿತ್ತ ಆ. 31ರ ಆದಿತ್ಯವಾರ ಬೆಳಗ್ಗೆ 10 ಗಂಟೆಯ ಅನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬೆಳಗಿನ ಆಶ್ಲೇಷಾ ಬಲಿ ಸೇವೆಯು ಬೆಳಗ್ಗೆ 9 ರಿಂದ 2 ಪಾಳಿಯಲ್ಲಿ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.