ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆಯ ಬಳಿಕ ರಾಜ್ಯ ಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ಎಲ್ಲಾ ಕಂಬಳ ಕೂಟಗಳಿಗೆ ಮಾದರಿಯಾಗುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದೆ. ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ 7 ಮಂದಿ ಕ್ರೀಡಾಪಟುಗಳೂ ಭಾಗಿಯಾಗಿದ್ದರು.
ಮಧ್ಯಾಹ್ನ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು. ಪ್ರೊ|ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಕೆಸರುಗದ್ದೆ ಓಟ ಸ್ಪರ್ಧೆಗೆ ಕೆಂಪು ಬಾವುಟ ನಿಶಾನೆಯೊಂದಿಗೆ ಚಾಲನೆ ನೀಡಿದರು.
ಕೋಟಿ ಮತ್ತು ಚೆನ್ನಯ ಕರೆಯಲ್ಲಿ ತಲಾ 4 ಮಂದಿಯಂತೆ 10 ಸುತ್ತಿನ ಕೆಸರುಗದ್ದೆ ಓಟ ನಡೆಯಿತು. ಓಟದಲ್ಲಿ ಪ್ರಥಮ, ದ್ವಿತೀಯ ಮತ್ತು ಉತ್ತಮ ಸಮಯ ನಿರ್ವಹಣೆ ಮಾಡಿದ ಓಟಗಾರನ್ನು ಆಯ್ಕೆ ಮಾಡಿ ಸಂಜೆ ಸೆಮಿ ಫೈನಲ್ ನಡೆಯಿತು. ಸೆಮಿಫೈನಲ್‌ಗೆ 13 ಮಂದಿ ಭಾಗವಹಿಸಿದ್ದರು. ಫೈನಲ್ ಓಟದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು.
ನಮ್ಮ ಕುಟುಂಬಕ್ಕೂ ಪುತ್ತೂರಿನ ಮಣ್ಣಿಗೂ ಅನಾದಿ ಕಾಲದ ಸಂಬಂಧ:
ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, 6 ಬಾರಿ ಶಾಸಕನಾಗಿ, 13 ವರ್ಷ ಸಚಿವನಾಗುವ ಭಾಗ್ಯ ಬೆಳ್ಳಿಪ್ಪಾಡಿಯ ಮನೆತನಕ್ಕೆ ಸಿಕ್ಕಿದೆ. ಇದಕ್ಕೆ ಕಾರಣ ನಮ್ಮ ಕುಟುಂಬಕ್ಕೂ ಪುತ್ತೂರಿನ ಮಣ್ಣಿಗೆ ಅನಾದಿ ಕಾಲದ ಸಂಬಂಧ. ಈ ಕಂಬಳ ಯಶಸ್ವಿಯಾಗಲು ಕಂಬಳ ಆಯೋಜನೆ ಮಾಡಿದವರ ಶ್ರಮವಿದೆ. ಒಂದು ಸಮಯ ನಿಂತು ಹೋದರೂ ಮತ್ತೆ ಪುನರಾರಂಭಗೊಂಡು ಅಭೂತಪೂರ್ವವಾಗಿ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ನಡೆಯುತ್ತಿದೆ ಎಂದರು.
ರಾಜ್ಯ ಮಟ್ಟದ ಕೆಸರು ಗದ್ದೆ ಓಟದ ಸ್ಪರ್ಧೆಯ ತಾಂತ್ರಿಕ ಸಮಿತಿ ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕೂಡಮರ ಅವರು ಕ್ರೀಡಾಕೂಟದ ನಿರ್ವಹಣೆ ಮಾಡಿದರು. ತೀರ್ಪುಗಾರರಾದ ನಿರಂಜನ ರೈ ಮಠಂತಬೆಟ್ಟು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಂಬಳ ಸಮಿತಿ ಪದಾಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯ ಜೀವಂಧರ್ ಜೈನ್, ಸುಳ್ಯ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಸಾದ್ ನಳಿನ್ ಕುಮಾರ್ ಜೊತೆ ಬಂದಿದ್ದರು.
ಕ್ರೀಡಾ ಪಟುಗಳಾದ ಕರುಣಾಕರ ಶೆಟ್ಟಿ, ತಾರಾನಾಥ ಶೆಟ್ಟಿ, ರಾಜೀವ ಶೆಟ್ಟಿ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.