ಮುಂಬಯಿ: ಭಾರತ ತಂಡದ ಮಾಜಿ ಕ್ರಿಕೆಟಿಗ(Cricket) ವಿನೋದ್ ಕಾಂಬ್ಬಿ (Vinod Kambli) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನ ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವರದಿಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಶನಿವಾರದಂದೇ (ಡಿ.21) ಕಾಂಬ್ಬಿ ಆರೋಗ್ಯ ಹದಗೆಟ್ಟಿದ್ದು, ಅಂದೇ ಅವರನ್ನು ಥಾಣೆಯ ಆಕೃತಿ (Thane)ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ತಿಳಿದು ಬಂದಿದೆ. ವರದಿ ಪ್ರಕಾರ, 52 ವರ್ಷದ ಮಾಜಿ ಕ್ರಿಕೆಟಿಗನ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದರೂ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಿನೋದ್ ಕಾಂಬ್ಬಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬಾಲ್ಯದ ಕೋಚ್ ಆಬ್ರೇಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆತ್ಮೀಯ ಸ್ನೇಹಿತ ಸಚಿನ್ ತೆಂಡೂಲ್ಕರ್(Sachin Tendulkar) ಅವರನ್ನ ಭೇಟಿಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಸಮಯದಲ್ಲೂ ಕಾಂಬ್ಬಿ ಆರೋಗ್ಯ ಚೆನ್ನಾಗಿರಲಿಲ್ಲ. ಮಾತನಾಡಲು ಕೂಡ ಕಷ್ಟಪಡುತ್ತಿದ್ದರು.
ಸಚಿನ್ ಸಹಾಯ ಸ್ಮರಿಸಿದ್ದ ಕಾಂಬ್ಬಿ
ಇತ್ತೀಚೆಗೆ (ಡಿಸೆಂಬರ್‌ನಲ್ಲೇ) ವಿಕ್ಕಿ ಲಾಲ್ವಾನಿ ಯೂಟ್ಯೂಬ್(YouTube) ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದ ಕಾಂಬ್ಬಿ 2013ರಲ್ಲಿ ಎರಡು ಬಾರಿ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆಗ ಎರಡು ಬಾರಿಯೂ ಶಸ್ತ್ರಚಿಕಿತ್ಸೆಯ ವೆಚ್ಚವನ್ನ ಗೆಳೆಯ ಸಚಿನ್ ತೆಂಡೂಲ್ಕರ್ ಭರಿಸಿದ್ದರು ಎಂದು ಬಹಿರಂಗಪಡಿಸಿದ್ದರು. ಜೊತೆಗೆ ‘ಮೂತ್ರ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳ ಎದುರಿಸುತ್ತಿರುವುದಾಗಿ ತಿಳಿಸಿದ್ದರು. ಈ ಕಾಯಿಲೆಯಿಂದ ಹಲವು ಬಾರಿ ತಲೆ ತಿರುಗಿ ಬಿದ್ದಿದ್ದರೆ, ನನ್ನ ಮಗ, ಹೆಂಡತಿ ನನ್ನನ್ನು ಜೊತೆಗಿದ್ದು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.
1983ರ ವಿಶ್ವಕಪ್ ವಿಜೇತ ಭಾರತ ತಂಡದಿಂದ ಸಹಾಯ ಹಸ್ತ
ವಿನೋದ್ ಕಾಂಬ್ಳೆಯ ಸ್ಥಿತಿ ಗಮನಿಸಿದ್ದ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್ ವಿನೋದ್ ಕಾಂಬ್ಬಿಗೆ ಸಹಾಯ ಮಾಡಲು ಮುಂದಾಗಿದ್ದರು. ಸುನಿಲ್ ಗವಾಸ್ಕರ್ ಮಾತನಾಡಿ 1983ರ ವಿಶ್ವಕಪ್ ವಿಜೇತ ತಂಡವೂ ಕಾಂಬ್ಬಿ ಆರೋಗ್ಯ ವಿಚಾರವಾಗಿ ಚರ್ಚಿಸಿದೆ. ಇಡೀ ತಂಡವು ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ. ನಮ್ಮ ತಂಡವು ಕಾಂಬ್ಬಿಗೆ ಸಹಾಯ ಹಸ್ತ ಚಾಚಲು ಸಿದ್ಧವಾಗಿದ್ದು, ಅವರ ಗುಣಮುಖರಾಗಿಸಿ ವಾಪಸ್ ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು.