ಕಡಬ: 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ಸೆ. 27ರಂದು ಸಂಜೆ ಶ್ರೀ ರಾಮಕುಂಜೇಶ್ವರ ಕ್ರೀಡಾಂಗಣದ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಎಸ್‌ಜಿಕೆಹೆಚ್‌ಎಸ್ ವೇದಿಕೆಯಲ್ಲಿ ನಡೆಯಿತು.
ಅಭಿನಂದಿಸಿ ಮಾತನಾಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು, ಸತೀಶ್ ಭಟ್‌ರವರಿಗೆ ಅರ್ಹವಾಗಿಯೇ ರಾಜ್ಯ ಪ್ರಶಸ್ತಿ ದೊರೆತಿದೆ. ಇದು ಯೋಗ್ಯವಾಗಿದೆ. ಪ್ರಶಸ್ತಿಗಾಗಿ ಅವರೆಂದೂ ಬೆನ್ನುಬಿದ್ದು ಹೋಗಿಲ್ಲ. ಪ್ರಶಸ್ತಿಯೇ ಅವರನ್ನು ಹುಡುಕಿಕೊಂಡು ಬಂದಿದೆ ಎಂದರು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜನ್ಮಸ್ಥಳದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಆಯೋಜನೆಗೊಂಡಿದೆ. ಕ್ರೀಡೆ ಅಧ್ಯಯನಕ್ಕೆ ಬಾಧಕವಲ್ಲ. ಕ್ರೀಡೆ ಹಾಗೂ ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ಎರಡರಲ್ಲೂ ಯಶಸ್ವಿಯಾಗಬಹುದು. ಕಬಡ್ಡಿ ಸ್ಪೂರ್ತಿಯ ಕ್ರೀಡೆ. ಜೀವನದಲ್ಲಿ ಸಾಧನೆಗೆ ಇದೊಂದು ವೇದಿಕೆ ಎಂದರು.
ಅತಿಥಿಯಾಗಿದ್ದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಸಂಸದರ ಅನುದಾನದಲ್ಲಿ 8 ತಾಲೂಕುಗಳಿಗೆ ಕಬಡ್ಡಿ ಮ್ಯಾಟ್ ನೀಡಲಾಗಿದೆ. ಆಟಗಾರರು ಒಲಿಂಪಿಯಾಡ್‌ನಲ್ಲಿ ಆಡುವಾಗ ಕೆಳಗಿನ ಹಂತದಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ವಿಧಾನಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ಶಿಕ್ಷಣ, ಆರೋಗ್ಯ ಎಲ್ಲರ ಹಕ್ಕು. ಆದರೆ ಇವೆರಡು ಈಗ ಉಳ್ಳವರ ಪರವಾಗಿದೆ. ನಗರ ಪ್ರದೇಶದಲ್ಲಿ ಸಿಗಬಹುದಾದ ಶಿಕ್ಷಣ, ಪೇಜಾವರ ಶ್ರೀಗಳು ಹುಟ್ಟುಹಾಕಿದ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳಲ್ಲಿ ಸಿಗುತ್ತಿದೆ. ಸತೀಶ್ ಭಟ್‌ರಂತಹ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಶಿಕ್ಷಣ ತಜ್ಞರನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಸೇರಿಸಿಕೊಳ್ಳಬೇಕು. ಸ್ವಸ್ಥ ಸಮಾಜ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬೇಕಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ರಾಜ್ಯಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರ ಶಿಷ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್ ಕೆ.ಕೆ. ಅವರು, ಸತೀಶ್ ಭಟ್ ಅವರು 22 ವರ್ಷ ಬಿಳಿನೆಲೆ ಪ್ರೌಢಶಾಲೆಯಲ್ಲೂ 14 ವರ್ಷ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲೂ ಸೇವೆ ಮಾಡಿದ್ದಾರೆ. ಅವರೊಬ್ಬ ಆದರ್ಶ ಶಿಕ್ಷಕರಾಗಿದ್ದಾರೆ. ಸುಲಲಿತವಾಗಿ ಗಣಿತ ಪಾಠ ಮಾಡುತ್ತಿದ್ದರು. ಅವರು ರಾಮಾನುಜಾಚಾರ್ಯರಿಗೆ ಸಮಾನರಾಗಿದ್ದಾರೆ. ಕ್ರೀಡೆಯಲ್ಲೂ ಹುರಿದುಂಬಿಸುತ್ತಿದ್ದಾರೆ. ಅವರಿಗೆ ತಡವಾಗಿಯಾದರೂ ಅರ್ಹವಾಗಿಯೇ ಪ್ರಶಸ್ತಿ ದೊರೆತಿದೆ. ನಾವು ಅವರ ಶಿಷ್ಯರು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ಸತೀಶ್ ಭಟ್‌ರವರ ಇನ್ನೋರ್ವ ಶಿಷ್ಯ, ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಮಾತನಾಡಿ, ಸತೀಶ್ ಭಟ್ ಅವರಿಗೆ ಅರ್ಹವಾಗಿಯೇ ಪ್ರಶಸ್ತಿ ಬಂದಿದೆ. ಅವರು ನಮಗೆ ಶಿಕ್ಷಕನಾಗಿ, ಸ್ನೇಹಿತನಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಸತೀಶ್ ಭಟ್ ಅವರು, ಬಿಳಿನೆಲೆ ಹಾಗೂ ರಾಮಕುಂಜದಲ್ಲಿ ಶಿಕ್ಷಕನಾಗಿ ಸೇವೆ ಮಾಡಲು ಅವಕಾಶ ದೊರೆತಿದೆ. ಸಂಸ್ಥೆಯ ಆಡಳಿತ ಮಂಡಳಿ, ಸಹಶಿಕ್ಷಕರು, ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿದೆ. ನಾನು ನಿಮಿತ್ತ ಮಾತ್ರ. ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಸಾಧನೆಗೆ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನಿರ್ಣಾಯಕ ಮಂಡಳಿ ಅಧ್ಯಕ್ಷ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಪಿ.ಏನಕೆಲ್ಲು ಮಾತನಾಡಿ, ಸತೀಶ್ ಭಟ್‌ರವರು ವಿಶೇಷ ಸಾಧಕ. ಅತ್ಯುತ್ತಮ ಶಿಕ್ಷಕ, ಯೋಗಪಟವೂ ಆಗಿದ್ದಾರೆ. ಅವರ ಬಹಳಷ್ಟು ಶಿಷ್ಯಂದಿರು ಉನ್ನತ ಹುದ್ದೆಯಲಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.
ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಹಾಗೂ ಸುಮನ ಅವರಿಗೆ ಶಾಲು, ಮೈಸೂರು ಪೇಟ, ಫಲ ತಾಂಬೂಲ, ಸ್ಮರಣಿಕೆ ನೀಡಿ ಅವರ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸತೀಶ್ ಭಟ್‌ರವರ ಕುರಿತ ಅಭಿನಂದನಾ ಗ್ರಂಥವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಹಿರಿಯ ಉಪನ್ಯಾಸಕ ವಸಂತ ಭಟ್ ಹಾಗೂ ಅವರ ಪತ್ನಿ ಜ್ಯೋತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ ಅಭಿನಂದಿಸಿ ಮಾತನಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಮಂಗಳೂರು ಹೈಟೆಕ್ ಬಿಲ್ಡಿಂಗ್ ಸೊಲ್ಯೂಷನ್ ಮೇನೇಜಿಂಗ್ ಡೈರೆಕ್ಟರ್ ಸಂತೋಷ್ ಟಿ.ವಿ., ಪುಣೆ ಐಡಿಬಿ ಸಾಫ್ಟ್ವೇರ್ ಕಂಪನಿಯ ರೆವೆನ್ಯೂ ಸ್ಪೆಷಲಿಸ್ಟ್ ಮಾನಸ ಭಟ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಸಂದರ್ಭೋಚಿತವಾಗಿ ಮಾತನಾಡಿ ಸತೀಶ್ ಭಟ್‌ರವರಿಗೆ ಶುಭಹಾರೈಸಿದರು.
ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಸೇಸಪ್ಪ ರೈ, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ. ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿ, ವಂದಿಸಿದರು.