ಕಡಬ: ಕ್ರೀಡೆಯಲ್ಲಿ ಭಾಗವಹಿಸುವುದು ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಚಾರಕ್ಕೆ ಸೀಮಿತವಾಗದೆ ಪ್ರತಿಭೆ ಅನಾವರಣಕ್ಕೆ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಸಾಧನೆ ಮಾಡುವುದು ಮುಖ್ಯ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬ ತಾಲೂಕು ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಕನ್ನಡ ಮಾದ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾರೀರಿಕ ಮಾನಸೀಕ ಹಾಗು ಭಾವನಾತ್ಮಕ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಅಪಾರವಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದಲ್ಲಿ ಅನೇಕ ಸವಾಲು ಸಮಸ್ಯೆಗಳು ಎದುರಾಗುತ್ತದೆ. ಇದೆಲ್ಲವನ್ನು ಮುಂದಿನ ಜೀವನಕ್ಕೆ ಸ್ಪೂರ್ತಿಯಾಗಿಸಿಕೊಂಡು ಸಾಧನೆ ಮಾಡಿದಾಗ ಪ್ರತಿಫಲ ದೊರೆಯುತ್ತದೆ. ಇಲ್ಲಿ ನಡೆಯುವ ಪಂದ್ಯಾಟದಲ್ಲಿ ನ್ಯಾಯಯುತ ತೀರ್ಮಾಣವನ್ನು ತೀರ್ಪುಗಾರರು ನೀಡುವ ಮುಖಾಂತರ ಕಬಡ್ಡಿಯ ಗೌರವ ಕಾಪಾಡಬೇಕು ಎಂದರು.
ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಚೆಯರ್‌ಮೆನ್ ರಾಕೇಶ್ ಮಲ್ಲಿ ಮಾತನಾಡಿ, ಕಬಡ್ಡಿಯಂತಹ ನಮ್ಮ ಮಣ್ಣಿನ ಕ್ರೀಡೆ ಗ್ರಾಮೀಣ ಭಾಗದಲ್ಲಿ ಅಯೋಜನೆಗೊಂಡಾಗ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತದೆ. ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ದೊಡ್ಡ ಮಟ್ಟದ ಕ್ರೀಡೆಯನ್ನು ಅರ್ಥಗರ್ಬಿತವಾಗಿ ಅಯೋಜನೆ ಮಾಡಿ ಮಾದರಿಯಾಗಿದೆ ಎಂದರು.
ದ.ಕ ಜಿಲ್ಲಾ ಅಮೆಚೂರು ಅಸೋಸಿಯೇಶನ್ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ ಅಂತರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಲಕ್ಷ್ಮೀನಾರಾಯಣ ಶುಭಹಾರೈಸಿದರು.
ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಆತೂರಿನಿಂದ ಕಾಲೇಜು ಆವರಣದ ತನಕ ನಡೆದ ಮೆರವಣಿಗೆಗೆ ಆತೂರಿನಲ್ಲಿ ಚಾಲನೆ ನೀಡಿದರು. ಶಿಕ್ಷಕಿ ಹೇಮಲತಾ ಪ್ರದೀಪ ಬಾಕಿಲ ದ್ವಾರ ಉದ್ಘಾಟನೆ ಮಾಡಿದರು. ಯುಎಎನಲ್ಲಿ ವಿಜ್ಞಾನಿಯಾಗಿರುವ ವೀರಪ್ಪ ಪುರಿಕೆರೆ ಮಳಿಗೆಗಳನ್ನು ಉದ್ಘಾಟಿಸಿದರು. ಫಿನ್‌ಲ್ಯಾಂಡ್ ನಲ್ಲಿ ವಿಜ್ಞಾನಿಯಾಗಿರುವ ಡಾ.ನೋಣಪ್ಪ ಅವರು ವಿಶ್ವೇಶತೀರ್ಥ ಸಭಾಂಗಣ ಉದ್ಘಾಟಿಸಿದರು. ಬಿ.ಎಮ್ ಗ್ರೂಪ್ ಮುಖ್ಯಸ್ಥ ಡಾ.ವಿ ಕನಕರಾಜ್ ಮತ್ತು ಕಬಡ್ಡಿ ಅಯೋಜನಾ ಸಮಿತಿ ಉಪಾಧ್ಯಕ್ಷ ಸೇಸಪ್ಪ ರೈ ಕ್ರೀಡಾಂಗಣ ಉದ್ಘಾಟಿಸಿದರು.
ಕಡಬ ತಾಲೂಕು ಅಮೆಚೂರು ಕಬಡ್ಡಿ ನಿರ್ಣಾಯಕರ ಮಂಡಳಿ ಅಧ್ಯಕ್ಷ ದಿನೇಶ್ ಎಂ ನೆಟ್ಟಣ, ಕಡಬ ಠಾಣಾ ಉಪನಿರೀಕ್ಷಕ ಅಭಿನಂದನ್ ಎಸ್, ಶ್ರೀ ರಾಮಕುಂಜೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಪ್ರಾಂಶುಪಾಲ ಚಂದ್ರಶೇಖರ ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ, ಕಬಡ್ಡಿ ಅಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ , ಅಧ್ಯಕ್ಷ ರಾಧಾಕೃಷ್ಣ ಕೆ ಎಸ್, ಉಪಾಧ್ಯಕ್ಷ ಟಿ.ನಾರಾಯಣ ಭಟ್, ಪ್ರಚಾರ ಸಮಿತಿ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಪ್ರಮುಖರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಚಂದ್ರಶೇಖರ ಸಣ್ಣಾರ ಮೊದಲಾದವರು ಇದ್ದರು.
ವಿದ್ಯಾರ್ಥಿಗಳಿಂದ ನಾಡಗೀತೆ, ರೈತಗೀತೆ, ರಾಷ್ಟ್ರ ಗೀತೆ, ಸಂವಿಧಾನ ಪಿಠೀಕೆ, ಪ್ರತಿಜ್ಞಾವಿಧಿ ನಡೆಯಿತು. ದಿವಾಕರ ಉಪ್ಪಳ, ಮತ್ತು ವಿಜಯ್ ಅತ್ತಾಜೆ ಕ್ರೀಡಾ ಉದ್ಘೋಷಕರಾಗಿದ್ದರು.
ದೈಹಿಕ ಶಿಕ್ಷಣ ಜಿಲ್ಲಾ ಶಿಕ್ಷಣಾಧಿಕಾರಿ ಭುವನೇಶ್ ಎಂ ಪ್ರಸ್ತಾವಿಸಿದರು. ಕಬಡ್ಡಿ ಅಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಣಾಧಿಕಾರಿ ಚಕ್ರಪಾಣಿ ವಂದಿಸಿದರು. ಉಪನ್ಯಾಸಕ ಚೇತನ್ ಕುಮಾರ್ ಆನೆಗುಂಡಿ ನಿರೂಪಿಸಿದರು.