ಪುತ್ತೂರು: ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ ಶ್ರೀ ರಾಮಕುಂಜೇಶ್ವರ ಕ್ರೀಡಾಂಗಣದಲ್ಲಿ 2025 ಸೆಪ್ಟೆಂಬರ್ 27, 28ರಂದು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 26ರಂದು ಸಂಜೆ 5 ಗಂಟೆಗೆ ಪ್ರಥಮ ಆಗಮಿತ ತಂಡವನ್ನು ಕ್ರೀಡಾಂಗಣಕ್ಕೆ ಸ್ವಾಗತಿಸಲಾಗುವುದು. 27ರಂದು ಬೆಳಿಗ್ಗೆ 9ಕ್ಕೆ ಆತೂರು ಸಿಎ ಬ್ಯಾಂಕ್ ಬಳಿಯಿಂದ ಮೆರವಣಿಗೆ ಉದ್ಘಾಟನೆ, 10 ಗಂಟೆಗೆ ಪ್ರವೇಶದ್ವಾರ, ಮಳಿಗೆಗಳು ಮತ್ತು ಸಭಾಂಗಣದ ಉದ್ಘಾಟನೆ, 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. 11.30ಕ್ಕೆ ಕ್ರೀಡಾಂಗಣ ಉದ್ಘಾಟನೆ ಹಾಗೂ ಪಂದ್ಯಾಟಗಳ ಆರಂಭ. ಸಂಜೆ 6ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಹಾಗೂ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ರಾತ್ರಿ 9.30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.
ಸೆ. 28ರಂದು ಬೆಳಿಗ್ಗೆ 9ರಿಂದ ಬಾಲಕ ಬಾಲಕಿಯರ ಉಪಾಂತ್ಯ ಪಂದ್ಯಾಟಗಳು, ಮಧ್ಯಾಹ್ನ 12ರಿಂದ ಅಂತಿಮ ಪಂದ್ಯಾಟಗಳು ನಡೆಯಲಿವೆ. ಮಧ್ಯಾಹ್ನ 2ರಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ, ಸಂಜೆ 4ರಿಂದ ಸಾಂಸ್ಕೃತಿಕ ರಸಸಂಜೆ ಚುರುಮುರಿ (ಹಾಸ್ಯ – ನೃತ್ಯ- ಸಂಗೀತ) ಜರುಗಲಿದೆ.
ಸಂಯೋಜನ ಸಮಿತಿ ಸಂಚಾಲಕ ಕೇಶವ್ ಅಮೈ ಮಾತನಾಡಿ, ಸೆ. 27ರಂದು ನಡೆಯುವ ಮೆರವಣಿಗೆಯ ಉದ್ಘಾಟನೆಯನ್ನು ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ ನೆರವೇರಿಸಲಿದ್ದಾರೆ. ಪ್ರದೀಪ ಬಾಕಿಲ ದ್ವಾರವನ್ನು ಹೇಮಲತಾ ಪ್ರದೀಪ್ ಬಾಕಿಲ, ಮಳಿಗೆಗಳನ್ನು ಇಂಜಿನಿಯರ್ ವೀರಪ್ಪ ಪುರಿಕೆರೆ ಯುಎಇ, ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನೆಯನ್ನು ವಿಜ್ಞಾನಿ ಡಾ. ನೋಣಪ್ಪ ಫಿನ್ ಲ್ಯಾಂಡ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಅಧೊಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಶಾಸಕ ಅಶೊಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸುವರು. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಚೆಯರ್ ಮೆನ್ ರಾಕೇಶ್ ಮಲ್ಲಿ, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮೊದಲಾದವರು ಅತಿಥಿಗಳಾಗಿರುವರು.
ರಾತ್ರಿ 8.30ಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಅಭಿನಂದನಾ ಭಾಷಣ ಮಾಡುವರು. ವಿಶೇಷ ಆಕರ್ಷಣೆಯಾಗಿ ಅರವಿಂದ್ ಬೋಳಾರ್, ಜೆ.ಪಿ. ತುಮಿನಾಡ್ ಉಪಸ್ಥಿತರಿರುವರು ಎಂದು ವಿವರಿಸಿದರು.
ಸಂಜೆ 6ಕ್ಕೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಖ್ಯಾತಿಯ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ 3 ಗಂಟೆ ಕಾರ್ಯಕ್ರಮ ನೀಡಲಿದ್ದಾರೆ. ಇದರಲ್ಲಿ ಗುಜರಾತಿನ ಗಾರ್ಭನೃತ್ಯ ಮತ್ತು ದಾಂಡಿಯ, ಬಡಗುತಿಟ್ಟು ಯಕ್ಷಗಾನ ಶ್ರೀ ರಾಮ ಪಟ್ಟಾಭಿಷೇಕ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಪುರುಲಿಯಾ, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ ವರ್ಷಧಾರೆ, ಶಾಸ್ತ್ರೀಯ ನೃತ್ಯ ನವದುರ್ಗೆಯರು ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಪಂದ್ಯಾಟದ ವಿಶೇಷತೆಯಾಗಿ ಕೃಷಿಮೇಳ, ವಾಣಿಜ್ಯ ಮೇಳ, ಶೈಕ್ಷಣಿಕ ಮೇಳ, ಸಾಂಸ್ಕೃತಿಕ ವೈವಿಧ್ಯ, ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಆಯೋಜನಾ ಸಮಿತಿಯ ಪ್ರಮೋದ್ ಉಪಸ್ಥಿತರಿದ್ದರು.