ಸಮಾಜದ ಮಕ್ಕಳೆಲ್ಲರೂ ನನ್ನವರು ಎಂದು ಮನಗಂಡು ಸಾಮಾನ್ಯರನ್ನೂ ಅಸಾಮಾನ್ಯರಾಗಿ ರೂಪಿಸಿದವರು ಪುತ್ತೂರಿನ ಸ್ವರ್ಣೋದ್ಯಮಿ ಜಿ ಎಲ್.ಆಚಾರ್ಯರು.
ವ್ಯಕ್ತಿಯೊಬ್ಬ ಶಕ್ತಿಯಾಗಬೇಕಿದ್ದರೆ ಅಂತಃಸತ್ವಕ್ಕೆ ಪ್ರೇರಣೆ ನೀಡುವವರು ಬೇಕು. ಹಣತೆ ಉರಿಯಬೇಕಿದ್ದರೆ ಎಣ್ಣೆ ಎರೆಯುವವರು ಬೇಕು. ಹೀಗೆ ಪುತ್ತೂರನ್ನು ಇಂದಿನ ಶಕ್ತಿಕೇಂದ್ರ ಆಗಿಸಿದವರೇ ಜಿ.ಎಲ್.ಆಚಾರ್ಯರು. ಅವರ ಸತ್ಸಂಕಲ್ಪದ ಶಿಕ್ಷಣ ಯೋಜನೆಗೆ ಲಕ್ಷಾಂತರ ಫಲಾನುಭವಿ ವಿದ್ಯಾರ್ಥಿಗಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನುಡಿದರು.
ಫೆ.9ರಂದು ಭಾನುವಾರ ಸಂಜೆ ಎಡನೀರು ಮಠದಲ್ಲಿ ನಡೆದ ಜಿ ಎಲ್. ಆಚಾರ್ಯ ಪುತ್ತೂರು ಅವರ ಶತಮಾನದ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ವಿ. ಅವರು ಜಿ.ಎಲ್.ಆಚಾರ್ಯರು ಕೇವಲ ಉದ್ಯಮಿಯಾಗಿರಲಿಲ್ಲ, ಅವರೊಳಗೆ ಒಂದು ನಾಡನ್ನು ಸಭ್ಯ ಸಾಂಸ್ಕೃತಿಕ ಕಳಕಳಿಯೊಂದಿಗೆ ಶುದ್ಧ ಸಮಾಜವನ್ನಾಗಿ ರೂಪಿಸುವ ದಾರ್ಶನಿಕ ಕಳಕಳಿ ಇತ್ತು ಎಂದರು.

ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ಅವರೇ…!
ಸುಳ್ಯದ ನನ್ನನ್ನು ಹಿಂದೆ ಪುತ್ತೂರಿನಲ್ಲಿ ಚುನಾವಣೆಗೆ ನಿಲ್ಲಿಸಿದಾಗ ಪುತ್ತೂರು ಕ್ಷೇತ್ರ ಗೂಂಡಾಗಳ ಕೈಯ್ಯಲ್ಲಿತ್ತು. ಚುನಾವಣೆ ಹೇಗೆ ನಡೆಯಬೇಕೆಂಬುದನ್ನು ಭೂಗತಲೋಕವೇ ನಿರ್ಣಯಿಸುತಿತ್ತು. ಇಂಥ ಕಡೆಗೆ ಅಭ್ಯರ್ಥಿಯಾಗಿ ಬಂದಾಗ ನಾನು ಮೊದಲು ಹೋಗಿ ಆಶೀರ್ವಾದ ಮಾರ್ಗದರ್ಶನ ಪಡೆದದ್ದೇ ಜಿ.ಎಲ್.ಆಚಾರ್ಯರಿಂದ. ಅಂಥ ನಾನು ಮುಂದೆ ಮುಖ್ಯಮಂತ್ರಿ ಆದಾಗಲೂ ಅವರಲ್ಲಿಗೆ ಹೋಗಿದ್ದೆ, ಆಶೀರ್ವಾದ ಪಡೆದಿದ್ದೆ. ಆಗವರು ಹೇಳಿದ್ದರು “ಅಂತೂ ಪುತ್ತೂರಿನಿಂದಲೂ ಒಬ್ಬರು ಮುಖ್ಯಮಂತ್ರಿ ಆದರಲ್ಲ” ಎಂದು. ಆಗ ನಾನೆಂದಿದ್ದೆ “ಮಾಡಿದವರು ನೀವೇ ಅಲ್ಲವೇ” ಎಂದು!
ಈ ಘಟನೆಯನ್ನೆಲ್ಲಾ ಮೆಲುಕಿದ ಡಿ.ವಿ.ಸದಾನಂದ ಗೌಡರು ಬಂಗಾರ ಸದೃಶ ವ್ಯಕ್ತಿತ್ವವೆಂದು ಜಿ.ಎಲ್.ಆಚಾರ್ಯರನ್ನು ಸ್ಮರಿಸಿ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ. ಅಧ್ಯಕ್ಷತೆ ವಹಿಸಿದರು.ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ. ರಾಮಕುಂಜ ಶತಮಾನದ ನೆನಪಿನ ಸಂಸ್ಮರಣಾ ಭಾಷಣ ಮಾಡಿದರು. ಸಮಾರಂಭದಲ್ಲಿ ಶತಮಾನದ ನೆನಪಿನ ಸ್ಮೃತಿಗ್ರಂಥ “ಬಂಗಾರ” ಕೃತಿಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳು ಬಿಡುಗಡೆ ಮಾಡಿ ಆಶೀರ್ವಚನವಿತ್ತರು. ಕೃತಿಯ ಸಂಪಾದಕ ನಾ.ಕಾರಂತ ಪೆರಾಜೆ ಕೃತಿ ಪರಿಚಯ ಮಾಡಿ ಜಿ ಎಲ್ ಆಚಾರ್ಯರ ವ್ಯಕ್ತಿತ್ವ, ಕೊಡುಗೆ ಮೆಲುಕಿದರು.
ಪೂತ್ತೂರಿನ ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಅಧ್ಯಕ್ಷತೆವಹಿಸಿದರು.
ಮಂಗಳೂರು ವಿ.ವಿಯ ವಿಶ್ರಾಂತ ಪ್ರಾಧ್ಯಾಪಕ ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ಜಿ.ಎಲ್.ಬಲರಾಮ ಆಚಾರ್ಯ ಸ್ವಾಗತಿಸಿದರು. ಎಡನೀರು ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.