ಧಾರ್ಮಿಕ

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಪಂಬದ ಜನಾಂಗಕ್ಕೆ ಸೇರಿದ ಡಾ. ರತಿ ಅವರು ಇದರ ವಿರುದ್ಧ ಧ್ವನಿ ಎತ್ತಿದ್ದು, ಈ ಘಟನೆಯನ್ನು ದೈವದ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡವರು ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

chennai-shopping
maithri

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ದೈವ ನರ್ತನ ಸೇವೆಗೆ ಅದರದ್ದೇ ಆದ ಪರಂಪರೆ ಇದೆ. ಈ ಸೇವೆಯನ್ನು ಪಂಬದ, ಪಾಣಾರ, ನಲಿಕೆ ಸೇರಿದಂತೆ 16 ಜಾತಿಗಳವರು ಮಾಡಬೇಕೇ ವಿನಾ ಬೇರೆ ಜಾತಿಯವರು ಮಾಡುವಂತಿಲ್ಲ. ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಯುವಕನಿಂದ ನರ್ತನ ಸೇವೆ ಮಾಡಿಸಿದ್ದಾರೆ. ಇದು ಸರಿಯಲ್ಲ ಎಂದರು.

ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ಹಿಂದೆ ಸುಬ್ಬಣ್ಣ ಪಂಬದ, ಆನಂತರ ಭಾಸ್ಕರ ಪಂಬದ ಪದವಿನಂಗಡಿ, ಮೂಲ್ಕಿಯ ಕುಮಾರ ಪಂಬದರು ದೈವ ನರ್ತನ ಸೇವೆ ಮಾಡುತ್ತಿದ್ದರು. 2026ರ ಈ ಬಾರಿಯ ದೈವದ ಸೇವೆಗೆ ಆಡಳಿತ ಕಮಿಟಿಯು ಕಾಸರಗೋಡು ಜಿಲ್ಲೆಯ ಚಿಪ್ಪಾರಿನ ಗಣೇಶ ಪಂಬದರಿಗೆ ವಹಿಸಿತ್ತು. ಆದರೆ ಗಣೇಶ್ ಪಂಬದ ಮತ್ತು ಆತನ ಪರಿಚಾರಕರು ಕಡಿಮೆ ಸಂಬಳಕ್ಕೆ ಸಿಗುತ್ತಾರೆಂದು ಪದವಿನಂಗಡಿಯ ದಿವಂಗತ ಗಣೇಶ್ ಪಂಬದರ ಕ್ರಿಶ್ಚಿಯನ್ ಪತ್ನಿಯ ಪುತ್ರನನ್ನು ನೇಮ ಕಟ್ಟಲು ಬಳಸಿದ್ದಾರೆ. ಇದು ಪಂಬದ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

ಗಣೇಶ ಪಂಬದರಿಗೆ ಎರಡು ಮದುವೆಯಾಗಿದ್ದು, ಮೊದಲಿಗೆ ಕ್ರಿಶ್ಚಿಯನ್ ಪತ್ನಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಬಳಿಕ ಆಕೆಯನ್ನು ತ್ಯಜಿಸಿ ವಿಶ್ವಕರ್ಮ ಸಮುದಾಯದ ಮಹಿಳೆಯನ್ನು ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದು, ಇದೀಗ ಆತನ ಮಗನಿಂದ ನೇಮ ಕಟ್ಟಿಸಿದ್ದಾರೆ. ಹೀಗಾದರೆ ಮುಂದೆ ಬೇರೆ ಜಾತಿಯವರು, ಕ್ರಿಶ್ಚಿಯನ್ ಧರ್ಮದವರೂ ನೇಮ, ಕೋಲ ಕಟ್ಟುವುದನ್ನು ಮಾಡಿದರೆ ಒಪ್ಪಲು ಆಗುತ್ತದೆಯೇ? ಇದರಿಂದ ಪಂಬದ ಜನಾಂಗದ ವೃತ್ತಿ ಗೌರವ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

ಇದರ ಬಗ್ಗೆ ಪ್ರಶ್ನಿಸಲು ಹೋದಾಗ, ಗಣೇಶ್ ಪಂಬದ ಮತ್ತು ಆತನ ಅಳಿಯ ಸೂರಜ್ ಅವರು ಉಡಾಫೆಯ ಉತ್ತರ ನೀಡಿದ್ದಾರೆ. “ನಾವು ಯಾರನ್ನು ಬೇಕಾದರೂ ನೇಮ ಕಟ್ಟಿಸುತ್ತೇವೆ. ಹೆಂಗಸಾದ ನಿನಗೆ ನೇಮ ಕಟ್ಟಲು ತಾಕತ್ತಿದೆಯೇ?” ಎಂದು ಸ್ತ್ರೀತ್ವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಿಂದಿಸಿದ್ದಾರೆ. ಈ ವರ್ತನೆಯು ದೈವಾರಾಧನೆಯ ಹೆಸರಿನಲ್ಲಿ ನಡೆಯುತ್ತಿರುವ ಅಹಂಕಾರದ ಪರಮಾವಧಿ ಎಂದ ಅವರು, ಇದರ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ ಎಂದರು.

ಈ ಬಗ್ಗೆ ದೈವ ನರ್ತಕರ ಸಂಘಕ್ಕೆ ಮತ್ತು ಪ್ರಮುಖ ಗುತ್ತಿನವರಿಗೆ ತಿಳಿಸಿದ್ದು, ಈ ರೀತಿ ಮಾಡಿರುವುದು ತಪ್ಪೆಂದು ಹೇಳಿದರೂ, ಬಳಿಕ ನನ್ನದೇ ಬಾಯಿ ಮುಚ್ಚಿಸಲು ನೋಡಿದ್ದಾರೆ. ಬೋಳೂರಿನ ಜಾರಂದಾಯ ದೈವಸ್ಥಾನದ ಕಮಿಟಿಯವರು ಮುಂದಿನ ಬಾರಿ ಚಿಪ್ಪಾರಿನ ಗಣೇಶ ಪಂಬದರಿಗೆ ಸೇವೆ ನೀಡುವುದಿಲ್ಲ ಎಂದಿದ್ದಾರೆ. ದೈವಾರಾಧನೆಗೆ ಅಪಚಾರ ಮಾಡಿರುವ ಗಣೇಶ ಪಂಬದರ ಕೆಲಸವನ್ನು ನಮ್ಮ ಜನಾಂಗದವರು ಖಂಡಿಸಬೇಕು ಎಂದು ಡಾ.ರತಿ ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts