ಪುತ್ತೂರು: ಬನ್ನೂರಿನ ಸ್ಫೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ಮಾರ್ಚ್ 9ರಂದು ನಡೆಯಲಿರುವ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟದ ಅಂಗವಾಗಿ ಆಮಂತ್ರಣ ಪತ್ರವನ್ನು ಬುಧವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಕ್ಷಗಾನ ಸೇವಾ ಕರ್ತೃ ದಿನೇಶ್ ಸಾಲ್ಯಾನ್ ಅವರು, ಬನ್ನೂರಿನಲ್ಲಿ ಇದೇ ಮೊದಲ ಬಾರಿಗೆ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸಂಜೆ 5 ಗಂಟೆಗೆ ಕಟೀಲು ಮೇಳದ ದೇವರ ಆಗಮನ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಯಕ್ಷಗಾನ ಪ್ರದರ್ಶನ ಆರಂಭವಾಗಿ ರಾತ್ರಿ 12.30ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬನ್ನೂರಿನಲ್ಲಿ ನಡೆಯುವ ಈ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ, ಕಾರ್ಯದರ್ಶಿ ನಿತೀನ್ ನೆಕ್ಕಿಲ, ಸಲಹೆಗಾರರಾದ ಆನಂದ ನಾಯ್ಕ್, ಗೋಪಾಲ್, ಕೃಷ್ಣಪ್ಪ ನಾಯ್ಕ, ಸ್ಫೂರ್ತಿ ಯುವತಿ ಮಂಡಲದ ಅಧ್ಯಕ್ಷೆ ಶಬರಿ, ಸ್ಫೂರ್ತಿ ಬಾಲಸಭಾದ ಅಧ್ಯಕ್ಷೆ ಧನ್ಯಾಶ್ರೀ, ಕುಣಿತ ಭಜನೆಯ ಶಿಕ್ಷಕ ನಾಗೇಶ್ ಸಾಜಾ, ಶನೀಶ್ವರ ಕುಣಿತ ಭಜನಾ ತಂಡದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸ್ಫೂರ್ತಿ ಯುವಕ ಮಂಡಲದ ಉಪಾಧ್ಯಕ್ಷ ನವೀನ್ ಬನ್ನೂರು ವಂದಿಸಿದರು.






















