ಪುತ್ತೂರು:ದೇಯಿ ಬ್ಯೆದಿತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಶ್ರೀ ಶಿವಾನಂದ ತಂತ್ರಿಯವರ ನೇತ್ರತ್ವ ದಲ್ಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು, ಹೋಮ-ಹವನಗಳು ಹಾಗೂ ಅನ್ನಸಂತರ್ಪಣೆ ನಡೆಯಲಿವೆ. ದೂರದೂರಿನಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ.ಮಹೋತ್ಸವದ ದಿನಗಳಲ್ಲಿ ಗಣಪತಿ ಹೋಮ, ನವಕಲಶಾಭಿಷೇಕ, ವಿಶೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರಮುಖ ದಿನಗಳಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ಫೆ. 25 ರಂದು ಸಂಜೆ 5.30ರಿಂದ ಸ್ವಸ್ತಿ ಪುಣ್ಯಾಹ ಸ್ಥಳಶುದ್ಧಿ, ಸಾಮೂಹಿಕ ಪ್ರಾರ್ಥನೆ ಹಾಗೂ ಉಗ್ರಾಣ ಮೂಹೂರ್ತ ನಡೆಯಲಿದೆ.
ಫೆ. 26 ರಂದು ಗಣಪತಿ ಹೋಮ, ಗುರುಪೂಜೆ, ತೋರಣ ಮೂಹೂರ್ತ, ನಾಗದೇವರ ಸಾನಿಧ್ಯದಲ್ಲಿ ನವಕಲಶ, ಆಶ್ಲೇಷ ಬಲಿ ಹಾಗೂ ಧೂಮಾವತಿ ಸಾನಿಧ್ಯದಲ್ಲಿ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ಧಿ ನವಕಲಶಾಭಿಷೇಕ ನಡೆಯಲಿದೆ. ಬೆಳಿಗ್ಗೆ 11.35ಕ್ಕೆ ಧ್ವಜಾರೋಹಣ, ಪರ್ವಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಭಗವತೀ ಸೇವೆ ಹಾಗೂ ಧೂಮಾವತಿ ಬಲಿ ಉತ್ಸವ ನಡೆಯಲಿದ್ದು, ರಾತ್ರಿ 8.00ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ಹಾಗೂ 8.30ಕ್ಕೆ ಕಲ್ಲಾಲ್ದಾಯ ಗುಳಿಗ ನೇಮೋತ್ಸವ ಜರುಗಲಿದೆ.
ಫೆ. 27 ರಂದು ಬೆಳಿಗ್ಗೆ 6.00ರಿಂದ ಗಣಪತಿ ಹೋಮ ಹಾಗೂ ಧೂಮಾವತಿ ಸಾನಿಧ್ಯದಲ್ಲಿ ಶುದ್ಧಿ ಕ್ರಿಯೆಗಳು ನಡೆಯಲಿವೆ. ಬೆಳಿಗ್ಗೆ 8.00ರಿಂದ ಧೂಮಾವತಿ ದೈವದ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದ್ದು, 9.00ರಿಂದ ಧೂಮಾವತಿ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಧೂಮಾವತಿ ಬಲಿ ಉತ್ಸವ ನಡೆಯಲಿದ್ದು, ರಾತ್ರಿ 7.00ರಿಂದ ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು. ರಾತ್ರಿ 7.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ಹಾಗೂ 8.30ರಿಂದ ಕುಪ್ಪೆ ಪಂಜುರ್ಲಿ ಮತ್ತು ಕೊರತಿ ನೇಮೋತ್ಸವ ನಡೆಯಲಿದೆ.
ಫೆ. 28 ರಂದು ಬೆಳಿಗ್ಗೆ 6.00ರಿಂದ ಗಣಪತಿ ಹೋಮ ಹಾಗೂ ಎಲ್ಲಾ ಸಾನಿಧ್ಯಗಳಿಗೆ ನವಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಪಲ್ಲಪೂಜೆ, ಅನ್ನಸಂತರ್ಪಣೆ ಹಾಗೂ ಮಹಾಪೂಜೆ ನಂತರ ಮಡಿಲು ಸೇವೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5.30ರಿಂದ ಧೂಮಾವತಿ ಬಲಿ ಉತ್ಸವ ನಡೆಯಲಿದ್ದು, ರಾತ್ರಿ 7.30ಕ್ಕೆ ಬೈದರ್ಕಳರು ಗರಡಿ ಇಳಿಯುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 8.30ರಿಂದ ದೇಯಿ ಬೈದೆತಿ ನೇಮೋತ್ಸವ, ಮಾತೆ-ಮಕ್ಕಳ ಪುನೀತ ಸಮಾಗಮ ನಡೆಯಲಿದೆ. ರಾತ್ರಿ 9.00ರಿಂದ ದೇಯಿ ಬೈದೆತಿ ಪ್ರಸಾದ ವಿತರಣೆ ನಡೆಯಲಿದ್ದು, ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಬೈದರ್ಕಳ ದರ್ಶನ ಹಾಗೂ ನೇಮೋತ್ಸವದ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಮಾ. 1 ರಂದು ಬೆಳಿಗ್ಗೆ 5.00ರಿಂದ ಗಣಪತಿ ಹೋಮ ನಡೆಯಲಿದ್ದು,ಸಮಾರೋಪ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಮಿತಿ ಸದಸ್ಯರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.





















