ಪುತ್ತೂರು: ಮುಂದಿನ ಒಂದೂವರೆ ವರ್ಷದೊಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಎರಡು ವರ್ಷದೊಳಗೆ ಬ್ರಹ್ಮಕಲಶೋತ್ಸವ ನೆರವೇರಿಸುವ ಗುರಿಯನ್ನು ಹೊಂದಿಕೊಂಡು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಜನೆಯಂತೆ ಹಳೆಯ ಸಭಾಭವನ ತೆರವುಗೊಳಿಸಿ ದೇವರಮಾರು ಗದ್ದೆಯ ಇನ್ನೊಂದು ಭಾಗದಲ್ಲಿ ಸುಮಾರು 1000 ಜನರಿಗೆ ಆಸನ ವ್ಯವಸ್ಥೆಯೊಂದಿಗೆ ನೂತನ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಇದರ ಜೊತೆಗೆ 600 ಜನರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನೆಲ್ಲಿಕಟ್ಟೆಯ ದೇವಳ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಹಾಗೂ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಸರಕಾರದಿಂದ 3.75 ಕೋಟಿ ರೂ. ಅನುದಾನ ಲಭಿಸಿದೆ.
ಹಳೆಯ ಸಭಾಭವನ ತೆರವುಗೊಳಿಸಿದ ಜಾಗದಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ಕೊಳ ನಿರ್ಮಿಸಲು ಯೋಜಿಸಲಾಗಿದ್ದು, 60 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನಕ್ಕೆ ಆಧುನಿಕ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ರಾಜಾಂಗಣ ಸುತ್ತಲಿನ ಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಕೆರೆ ಅಭಿವೃದ್ಧಿಗೆ ಚಾಲನೆ ನೀಡಿ, ನೂತನ ಅಯ್ಯಪ್ಪ ಗುಡಿಗೆ ಶಂಕುಸ್ಥಾಪನೆ ನಡೆಯಿತು.
ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.





















