ಪುತ್ತೂರು: ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಶಾರದೋತ್ಸವಕ್ಕೆ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವಠಾರದ ಪುತ್ತೂರು ಶಾರದೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೊದಲಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಶಾರದಾ ಮೂರ್ತಿ ತರಲು ತೆರಳಲಾಯಿತು.
ಹಾರಾಡಿ ಹಿ.ಪ್ರಾ. ಶಾಲಾ ಬಳಿಯ ಶಿವಣ್ಣ ಪ್ರಭು (ಬಾಬುರಾಯ ಹೊಟೇಲ್)ರವರ ಮನೆಯ ಕಟ್ಟಡದ ನಿವಾಸದಿಂದ ಮೆರವಣಿಗೆ ಮೂಲಕ ಮುಖ್ಯರಸ್ತೆಯಿಂದಾಗಿ ಭಜನಾ ಮಂದಿರಕ್ಕೆ ಶಾರದಾ ಮೂರ್ತಿ ಆಗಮಿಸಿತು. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.
ವಿಗ್ರಹ ಪ್ರತಿಷ್ಠೆ ಬಳಿಕ ಶಾರದೋತ್ಸವ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜನತೆ ನಾಡಹಬ್ಬದ ಸಂಭ್ರಮದಲ್ಲಿದ್ದು, ಶಾರದಾ ಮಹೋತ್ಸವದ ಆರಾಧನೆಯಲ್ಲಿ ಪುತ್ತೂರಿನ ಭಕ್ತಾದಿಗಳು ಮತ್ತೊಮ್ಮೆ ಜ್ಞಾನಭರಿತ ಸಮಾಜವನ್ನು ನಿರ್ಮಾಣ ಮಾಡಲು ತಾವೆಲ್ಲ ಇಲ್ಲಿ ನೆರೆದಿವೆ. 91ನೇ ವರ್ಷದ ಸಂಭ್ರಮದಲ್ಲಿರುವ ಈ ಐತಿಹಾಸಿಕ ಶಾರದಾ ಮಹೋತ್ಸವ ಇದೊಂದು ದಸರಾ ಮಹೋತ್ಸವ ಆಗಿ ಪರಿವರ್ತನೆ ಆಗಿದೆ. ಮಂದಿರದ ಅಧ್ಯಕ್ಷ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಮೂರು ವರ್ಷದಿಂದ ವಿಜೃಂಭಣೆಯಿಂದ, ಸಂಭ್ರಮದ ಜತೆಗೆ ಪುತ್ತೂರಿನ ಜನತೆಗೆ ಭಜನೆಯ ಮುಖಾಂತರ ಭಗವಂತನನ್ನು ಕಾಣುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಮುಂದಿನ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿಶ್ವನಾಥ್ ಕುಲಾಲ್, ರಾಜೇಶ್ ಬನ್ನೂರು, ಅಜಿತ್ ಹೊಸಮನೆ, ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ, ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ನವೀನ್ ಕುಲಾಲ್, ಉಪಾಧ್ಯಕ್ಷರಾದ ಯಶವಂತ ಆಚಾರ್ಯ, ದಯಾನಂದ (ಆದರ್ಶ), ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಉತ್ಸವ ಸಮಿತಿ ಸಂಯೋಜಕ ಕೃಷ್ಣ ಎಂ. ಅಳಕೆ, ಶಾರದೆ ವಿಗ್ರಹ ರಚಿಸಿದ ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭು, ಕಿಟ್ಟಣ್ಣ ಗೌಡ, ಜಯಕಿರಣ್ ಉರ್ಲಾಂಡಿ, ವಸಂತ್, ಪಕೀರ ಗೌಡ, ಗೋಪಾಲ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.