ಪುತ್ತೂರು: ಪುತ್ತೂರು ಶಾರದೋತ್ಸವಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ವಿಜೃಂಭಣೆಯಿಂದ ನಡೆಯಲಿರುವ ಪುತ್ತೂರು ಶಾರದೋತ್ಸವದಲ್ಲಿ ಸೆ. 29ರಂದು ಶಾರದಾ ವಿಗ್ರಹ ಪ್ರತಿಷ್ಠೆಯಾಗಲಿದ್ದು, ಅ. 2ರಂದು ಸಂಜೆ ಅದ್ದೂರಿಯ ಶೋಭಾಯಾತ್ರೆ ನಡೆಯಲಿದೆ ಎಂದು ಶಾರದೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 22ರಿಂದ ಶಾರದಾ ಭಜನಾ ಮಂದಿರದಲ್ಲಿ 91ನೇ ವರ್ಷದ ನವರಾತ್ರಿ ಮಹೋತ್ಸವ ನಡೆಯುತ್ತಿದೆ. 29ರಂದು ಬೆಳಗ್ಗೆ ಶಾರದಾ ಪ್ರತಿಷ್ಠೆ ನಡೆಯಲಿದೆ. 30ರಂದು ಬೆಳಗ್ಗೆ ಚಂಡಿಕಾ ಯಾಗ ನಡೆಯಲಿದೆ ಎಂದರು.
ಅ. 2ರಂದು ಸಂಜೆ ಬೊಳುವಾರಿನಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. 4.55ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಶಾಸಕ ಅಶೋಕ್ ರೈ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭಗವಾಧ್ವಜ ಆರೋಹಣ ಮಾಡಲಿದ್ದಾರೆ.
ವಿಗ್ರಹ ವಿಸರ್ಜನೆಗೆ ವಿಶೇಷ ಲಿಫ್ಟ್, ರೀಲ್ಸ್’ಗೆ ಬಹುಮಾನ:
ಶಾರದಾ ಮೂರ್ತಿಯನ್ನು ಅತ್ಯಂತ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲು ವಿಶೇಷ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯ ದೃಶ್ಯ ಸೆರೆ ಹಿಡಿದು ಶಾರದೋತ್ಸವ ಪುತ್ತೂರು ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ಗೆ ಟ್ಯಾಗ್ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ವೀಡಿಯೋಗಳ ಪೈಕಿ ಅ. 10ರವರೆಗೆ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೀಡಿಯೋಗಳಿಗೆ ಪ್ರಥಮ, ದ್ವಿತೀಯ ನಗದು ಬಹುಮಾನ ನೀಡಲಾಗುವುದು ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಶೋಭಾಯಾತ್ರೆ ಸಮಿತಿ ಸಂಚಾಲಕ ನವೀನ್ ಕುಲಾಲ್ ಮಾತನಾಡಿ, ಶೋಭಾಯಾತ್ರೆಯಲ್ಲಿ 350 ಭಜಕರು ನೃತ್ಯ ಭಜನೆಯೊಂದಿಗೆ ಭಾಗವಹಿಸಲಿದ್ದಾರೆ. 3 ವರ್ಷಗಳಿಂದ ಅದ್ದೂರಿ ಶೋಭಾಯಾತ್ರೆ ನಡೆಯುತ್ತಿದ್ದು, ಈ ಬಾರಿ ಆಂಧ್ರದಿಂದ 1, ಕೇರಳದಿಂದ 13 ವಿಶಿಷ್ಟ ಕಲಾತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಮುಖ್ಯರಸ್ತೆಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಶೋಭಾಯಾತ್ರೆ ನಡೆಯಲಿದ್ದು, 5 ಕಡೆ ವಿಶೇಷ ಕಲಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶಾರದೋತ್ಸವ ಹಿನ್ನೆಲೆಯಲ್ಲಿ ಪುತ್ತೂರು ಮುಖ್ಯ ರಸ್ತೆಯನ್ನು ವಿದ್ಯುತ್ ದೀಪಾಲಂಕಾರ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಭಾನುವಾರದಿಂದ ಪೇಟೆ ಝಗಮಗಿಸಲಿದೆ. ಶೋಭಾಯಾತ್ರೆ ರಾತ್ರಿ 9 ಗಂಟೆಗೆ ದರ್ಬೆ ವೃತ್ತ ತಲುಪಿ, ಅಲ್ಲಿ 1 ಗಂಟೆ ವಿಶೇಷ ಕಲಾಪ್ರದರ್ಶನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವ ಸಮಿತಿಯ ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ಕೃಷ್ಣ ಎಂ. ಅಳಿಕೆ ಮತ್ತು ಶಾರದಾ ಭಜನಾ ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಉಪಸ್ಥಿತರಿದ್ದರು.