ಪುತ್ತೂರು: ಆನೆಗುಂದಿ ಪ್ರತಿಷ್ಠಾನ, ಸಹ ಟ್ರಸ್ಟ್ ಸಮಿತಿಗಳು ಹಾಗೂ ಪ್ರತಿಷ್ಠಾನದ ವ್ಯಾಪ್ತಿಯ ಪುತ್ತೂರು ಮಹಾಮಂಡಲ ಸಹಿತ ಮಠಕ್ಕೆ ಸಂಬಂಧಿಸಿದ 21 ದೇವಸ್ಥಾನಗಳು, ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೆ. 19ರಂದು ‘ಧರ್ಮ ರಕ್ಷಾ ಯಾತ್ರೆ’ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಮಾಡಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಹಾಗೂ ಸೇವೆಗಳನ್ನು ಸಲ್ಲಿಸಿದರು.ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.
ಧರ್ಮ ಕಾರ್ಯ ಮುನ್ನಡೆಸಲು ನಮಗೆ ಬಲ ದೊರೆತಂತಾಗಿದೆ:
ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಮಾಜದ ಗುರುಗಳ ಸೂಚನೆಯಂತೆ ಆನೆಗುಂದಿ ಪ್ರತಿಷ್ಠಾನ ಹಾಗೂ ಎಲ್ಲ ದೇವಸ್ಥಾನಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಎಂದು ಆಗಮಿಸಿ ಶ್ರೀ ಕ್ಷೇತ್ರಕ್ಕೆ ಸಮಾಜದ ಬೆಂಬಲವನ್ನು ವ್ಯಕ್ತಪಡಿಸಿರುವುದು ನಮಗೆ ಅತೀವ ಸಂತೋಷ ತಂದಿದೆ. ತಮ್ಮ ಕ್ಷೇತ್ರಗಳ ಮತ್ತು ಸಂಘ ಸಂಸ್ಥೆಗಳ ಮೂಲಕ ಒಟ್ಟು ಸಮಾಜದ ಕ್ಷೇತ್ರಕ್ಕೆ ಬೆಂಬಲ ದೊರೆತಿರುವುದು ಧರ್ಮ ಕಾರ್ಯವನ್ನು ಮುನ್ನಡೆಸಲು ನಮಗೆ ಬಲ ದೊರೆತಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ಒಡೆಯರ ಹೋಬಳಿ ಅವರು ಮಾತನಾಡಿ, ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಸಂಸ್ಕಾರ, ಸಂಸ್ಕೃತಿ ಉಳಿದಿದೆ ಎಂದರೆ ಶ್ರೀ ಕ್ಷೇತ್ರ ಧರ್ಮಸ್ಥಳದಂತಹ ಧಾರ್ಮಿಕ ಶ್ರದ್ದಾ ಕೇಂದ್ರ ಇರುವುದರಿಂದ ಸಾಧ್ಯವಾಗಿದೆ. ಇಂಥ ಪವಿತ್ರ ಕ್ಷೇತ್ರಕ್ಕೆ ವಿವಿಧ ಕಡೆಗಳಿಂದ ತುಂಬಾ ಅಪಪ್ರಚಾರ ಮಾಡುತ್ತಾ ಇದ್ದಾರೆ. ದೇವಸ್ಥಾನದ ರಕ್ಷಣೆಗೆ ನಮ್ಮ ಸಮಾಜ ಎಂದೂ ಮುಂದಿನ ಪಂಕ್ತಿಯಲ್ಲಿದೆ. ಆನೆಗುಂದಿ ಮಠ, ಎಲ್ಲಾ 23 ದೇವಸ್ಥಾನ ಹಾಗೂ ನಮ್ಮ ಸಂಘ ಸಂಸ್ಥೆಗಳು, ವಿಶ್ವಬ್ರಾಹ್ಮಣ ಸಮಾಜ ಶ್ರೀಕ್ಷೇತ್ರದೊಂದಿಗೆ ಎಂದೂ ಇದ್ದೇವೆ ಎಂದು ಭರವಸೆ ಕೊಡುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಲೊಕೇಶ್ ಎಂ.ಬಿ. ಆಚಾರ್ ಕಂಬಾರು ಮಾತನಾಡಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ|ಹರೀಶ್ ಆಚಾರ್ಯ ಜಲಕದಕಟ್ಟೆ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಪುತ್ತೂರಿನಿಂದ ಪುರುಷೋತ್ತಮ ಆಚಾರ್ಯ, ಇಂದಿರಾ ಪಿ. ಆಚಾರ್ಯ ಸೇರಿದಂತೆ ಸಮಾಜ ಪ್ರತಿನಿಧಿಗಳು ಭಾಗವಹಿಸಿದ್ದರು.