ಆಧ್ಯಾತ್ಮಿಕ ಹಿರಿಮೆ ಮತ್ತು ಸಾಂಸ್ಕೃತಿಕ ಆಚರಣೆಯ ಸಂಭ್ರಮದ ಕ್ಷಣವೊಂದಕ್ಕೆ ಕೆನಡಾ ಸಾಕ್ಷಿಯಾಗಿದ್ದು, 51 ಅಡಿ ಎತ್ತರದ ಶ್ರೀ ರಾಮನ ವಿಗ್ರಹವು ಈಗ ಪಶ್ಚಿಮದಲ್ಲಿ ಸನಾತನ ಧರ್ಮದ ಅತ್ಯುನ್ನತ ಸಂಕೇತವಾಗಿ ಲೋಕಾರ್ಪಣೆಯಾಗಿದೆ.
ಒಂಟಾರಿಯೊದ ಮಿಸ್ಸಿಸೌಗಾದಲ್ಲಿರುವ ಹಿಂದೂ ಹೆರಿಟೇಜ್
ಒಂಟಾರಿಯೊದ ಮಿಸ್ಸಿಸೌಗಾದಲ್ಲಿರುವ ಹಿಂದೂ ಹೆರಿಟೇಜ್ ಸೆಂಟರ್‌ನಲ್ಲಿ ಉತ್ತರ ಅಮೆರಿಕದ ಅತಿ ಎತ್ತರದ ರಾಮ ದೇವರ ಪ್ರತಿಮೆಯ ಅನಾವರಣ ಮಾಡಲಾಗಿದ್ದು, ಅದ್ದೂರಿ ಉದ್ಘಾಟನಾ ಸಮಾರಂಭದಲ್ಲಿ ಸಾವಿರಾರು ಭಕ್ತರು, ಗಣ್ಯರು ಮತ್ತು ರಾಜಕೀಯ ಮುಖಂಡರು ಭಾಗವಹಿಸಿದ್ದರು.
ದೆಹಲಿಯಲ್ಲಿ ಫೈಬರ್‌ಗ್ಲಾಸ್ ಮತ್ತು ಉಕ್ಕಿನ ಮೇಲ್ಪದರವನ್ನು ಬಳಸಿ ರಚಿಸಲಾದ ಈ ಪ್ರತಿಮೆಯನ್ನು ಗಂಟೆಗೆ 200 ಕಿ.ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ನಾಲ್ಕು ವರ್ಷಗಳ ಕಾಲ ಕೆಲಸ ನಡೆಸಿ ಯೋಜನೆಯ ಪೂರ್ಣಗೊಳಿಸಲಾಗಿದೆ. ಇದು ಭಾರತ ಮೂಲದ ಕೆನಡಾದ ಉದ್ಯಮಿ ಲಾಜ್ ಪ್ರಶೇರ್ ಅವರ ಉದಾರ ದೇಣಿಗೆಯಿಂದ ನಿರ್ಮಾಣ ಮಾಡಲಾಗಿದೆ.
ಭಾರತದಲ್ಲಿ ತಯಾರಿಸಲಾದ ಈ ವಿಗ್ರಹವನ್ನು ಕೆನಡಾದಲ್ಲಿ ಸ್ಥಳೀಯವಾಗಿ ನುರಿತ ಕುಶಲಕರ್ಮಿಗಳು ಜೋಡಿಸಿದ್ದು, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಎಂಜಿನಿಯರಿಂಗ್‌ನ ಮಿಶ್ರಣವನ್ನು ಪ್ರತಿಬಿಂಬವಾಗಿ ಗೋಚರಿಸಿದೆ.
ಸಮಾರಂಭದಲ್ಲಿ ಮಹಿಳಾ ಮತ್ತು ಲಿಂಗ ಸಮಾನತೆಯ ಸಚಿವೆ ರೆಚಿ ವಾಲ್ಲೆಜ್, ಖಜಾನೆ ಮಂಡಳಿಯ ಅಧ್ಯಕ್ಷ ಶಮ್ಮತ್ ಅಲಿ, ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ಮಣಿಂದರ್ ಸಿಧು ಮತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಕನ್ಸರ್ವೇಟಿವ್ ಪಕ್ಷದ ಮಧ್ಯಾಂತರ ನಾಯಕ ಆಂಡ್ಮಿ ಸ್ಟೀರ್ ಸೇರಿದಂತೆ ಕೆನಡಾದ ರಾಜಕೀಯ ರಂಗದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎಲ್ಲರೂ ಮೆಚ್ಚಿಕೊಂಡರು.
ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದರು, ದೇವಾಲಯದ ಆವರಣವು “ಜೈ ಶ್ರೀ ರಾಮ್” ಘೋಷಣೆಗಳು ಮತ್ತು ಸಂಭ್ರಮೋಲ್ಲಾಸದ ಬೃಹತ್ ಜಾತ್ರೆಯಂತೆ ಗೋಚರಿಸಿತು.
ಹಿಂದೂ ಪರಂಪರೆ ಕೇಂದ್ರದ ಸ್ಥಾಪಕ ಮತ್ತು ಪ್ರಧಾನ ಅರ್ಚಕ ಆಚಾರ್ಯ ಸುರೀಂದರ್ ಶರ್ಮ ಶಾಸ್ತ್ರಿ “ಮೂರ್ತಿ ಕೇವಲ ಕಲಾತ್ಮಕ ಸೃಷ್ಟಿಗಿಂತ ಹೆಚ್ಚಿನದಾಗಿದೆ. ಇದು ಸಮುದಾಯಕ್ಕೆ ಆಧ್ಯಾತ್ಮಿಕ ಕೊಡುಗೆಯಾಗಿದೆ. ಸದಾಚಾರವು ಯಾವಾಗಲೂ ನಮ್ಮ ಮಾರ್ಗವನ್ನು ಮಾರ್ಗದರ್ಶಿಸಬೇಕು ಎಂಬ ವಿಚಾರ ನೆನಪಿಸುತ್ತಿದೆ. 2024 ರಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮ ಜನ್ಮಭೂಮಿ ದೇವಾಲಯ ಉದ್ಘಾಟನೆಯಿಂದ ಪ್ರೇರಿತವಾದ ಕೆನಡಾದ ಪ್ರತಿಮೆಯು ವಿದೇಶಗಳಲ್ಲಿ ಆ ದೈವಿಕ ಆವೇಗವನ್ನು ಪ್ರತಿಬಿಂಬಿಸುತ್ತದೆ” ಎಂದರು.
ದೇವಾಲಯ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಇಳಿಯುವ ಮಾರ್ಗದಲ್ಲಿ ನೇರವಾಗಿ ಇದೆ, ಶ್ರೀರಾಮನ ಎತ್ತರದ ಪ್ರತಿಮೆ ಶೀಘ್ರದಲ್ಲೇ ನಗರಕ್ಕೆ ಬರುವ ಪ್ರಯಾಣಿಕರನ್ನು ಸ್ವಾಗತಿಸುವ ಮೊದಲ ಸ್ಥಳಗಳಲ್ಲಿ ಒಂದಾಗಲಿದೆ.