pashupathi
ಧಾರ್ಮಿಕ

ಧರ್ಮಾಭ್ಯುದಯ – ಧರ್ಮ ಶಿಕ್ಷಣ ಶಿಕ್ಷಕರಿಗೆ ಹಾಗೂ ಕಾರ್ಯಕರ್ತರಿಗೆ ಕಾರ್ಯಾಗಾರ | ಧಾರ್ಮಿಕ ಶಿಕ್ಷಣ ಸಮ್ಮೇಳನವಾಗಬೇಕು: ಕೇಶವ ಪ್ರಸಾದ್ ಮುಳಿಯ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಹಿಂದೂ ಧರ್ಮ ಶಿಕ್ಷಣ ಎಂಬುದು ಪ್ರತೀ ಹಿಂದೂ ಮನೆಯ ಪ್ರತಿಯೊಂದು ಮಗುವಿಗೂ ದೊರಕುವಂತಾಗಬೇಕು. ಈ ಹಿನ್ನೆಲೆಯಲ್ಲಿ ಧರ್ಮ ಶಿಕ್ಷಣಕ್ಕಾಗಿ ಇಡಿಯ ಹಿಂದೂ ಸಮಾಜ ಒಂದಾಗಬೇಕು. ವಿಶೇಷವಾಗಿ ಎಲ್ಲಾ ಮಠಾಧೀಶರೂ ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿಯ ವಿಭಾಗ ಪ್ರಮುಖ್ ಮುಳಿಯ ಕೇಶವ ಪ್ರಸಾದ್ ಮುಳಿಯ ಹೇಳಿದರು.

akshaya college

ಅವರು  ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ಭಾನುವಾರ ನಗರದ ಕಲ್ಲಾರೆಯಲ್ಲಿನ ಶಿವಕೃಪಾ ಸಭಾಭವನದಲ್ಲಿ ಧರ್ಮಾಭ್ಯುದಯ – ಹಿಂದೂ ಧರ್ಮ ಶಿಕ್ಷಣ ಸಂಘಟನೆಯ ಕಾರ್ಯಕರ್ತರು ಹಾಗೂ ಶಿಕ್ಷಕರಿಗಾಗಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮ ಶಿಕ್ಷಣ ಕೇವಲ ಒಂದು ಸಣ್ಣ ವ್ಯವಸ್ಥೆಯಾಗಿ ಉಳಿಯಬಾರದು. ಈ ಕಾರ್ಯಕ್ಕಾಗಿ ಎಲ್ಲರೂ ಜತೆಗೂಡಿ ಮುಂದಿನ‌ ದಿನಗಳಲ್ಲಿ ಬೃಹತ್ ಹಿಂದೂ ಧಾರ್ಮಿಕ ಶಿಕ್ಷಣ ಸಮ್ಮೇಳನ ಆಯೋಜನೆಗೊಳ್ಳಬೇಕು. ಆ ಕಾರ್ಯಕ್ರಮದಲ್ಲಿ ಭವಿಷ್ಯದಲ್ಲಿ ಧರ್ಮ ಶಿಕ್ಷಣ ಹೇಗಿರಬೇಕೆಂಬ ಕಾರ್ಯಯೋಜನೆಯನ್ನು ರೂಪುಗೊಳಿಸುವಂತಾಗಬೇಕು. ನಿರ್ಣಯಗಳನ್ನು ತೆಗೆದುಕೊಳ್ಳುವಂತಾಗಬೇಕು ಎಂದು ನುಡಿದರು.

ಅಭ್ಯಾಗತರಾಗಿ ಆಗಮಿಸಿದ್ದ ಜಿ.ಎಲ್.ಆಚಾರ್ಯ ಜ್ಯುವೆಲ್ಸ್ ನ ಮಾಲಕ ಬಲರಾಮ‌ ಆಚಾರ್ಯ ಮಾತನಾಡಿ ಧರ್ಮ ಶಿಕ್ಷಣ ಎಂಬುದು ಬೃಹತ್ ಚಳುವಳಿಯಾಗಿ ರೂಪುಗೊಳ್ಳಬೇಕಿದೆ. ಭಜನಾ ಮಂದಿರಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಧರ್ಮ‌ಶಿಕ್ಷಣವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಕೇಂದ್ರಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ದಿಕ್ಸೂಚಿ ಭಾಷಣ ಮಾಡಿದ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ ನಾವು ಮತ್ತೊಬ್ಬರಿಂದ ಪ್ರಾಮಾಣಿಕತೆ ನಿರೀಕ್ಷೆ ಮಾಡುತ್ತೇವಾದರೆ ನಾವೂ ಪ್ರಾಮಾಣಿಕರಾಗಿರಬೇಕು ಎಂಬುದು ಅಪೇಕ್ಷೀಣೀಯ. ಧರ್ಮದ ಭಾವನೆ ಸಹಜವಾಗಿಯೇ ನಮ್ಮೊಳಗೆ ಒಡಮೂಡಿರುವುದರಿಂದಲೇ ಧರ್ಮ ಸದಿಕ್ಷಣದ ಕಲ್ಪನೆ ಮೂಡಿದೆ. ಹಾಗಾಗಿ‌ ಪ್ರಾಮಾಣಿಕವಾದ ಭಾವನೆಯ ಪ್ರತಿರೂಪವಾಗಿ ಧರ್ಮ ನಮ್ಮೊಳಗೆ ಅಸ್ತಿತ್ವ ಹೊಂದಿದೆ ಎಂದು ತಿಳಿಸಿದರು.

ಧರ್ಮದ ವಿಚಾರದಲ್ಲಿ ಮಾತನಾಡುವಾಗ ಅತ್ಯಂತ ಜಾಗ್ರತೆ ವಹಿಸಬೇಕು. ಮತ್ತೊಬ್ಬರನ್ನು ಕೆರಳಿಸುವುದು ಬಹಳ ಸುಲಭ, ಆದರೆ ಉಪಶಮನ ಮಾಡುವುದು ಕಡುಕಷ್ಟ. ಆದ್ದರಿಂದ ಧರ್ಮ ಎಂದರೆ ನಾವು ಜೀವನದಲ್ಲಿ ಪತನಗೊಳ್ಳದಂತೆ ನಮ್ಮನ್ನು ಮೇಲೆತ್ತುವ ನಮ್ಮೊಳಗೇ ಇರುವ ಎಚ್ಚರ ಎಂಬುದು ನಮ್ಮ ಗಮನದಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಧರ್ಮ ಶಿಕ್ಷಣ ಸಮಿತಿ – ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ ಕೇವಲ‌ ಮಕ್ಕಳಿಗಷ್ಟೇ ಅಲ್ಲ, ಹಿರಿಯರಿಗೂ ಧರ್ಮ ಶಿಕ್ಷಣದ ಅಗತ್ಯವಿದೆ. ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ, ಆಶೀರ್ವಾದಗಳೊಂದಿಗೆ ಪ್ರಾರಂಭಗೊಳ್ಳುತ್ತಿರುವ ಈ ಧರ್ಮ ಶಿಕ್ಷಣದ ವ್ಯವಸ್ಥೆ ಇಡಿಯ ಹಿಂದೂ ಸಮಾಜಕ್ಕೆ ನಮ್ಮತನವನ್ನು ಕಲಿಯುವ ಅವಕಾಶಮಾಡಿಕೊಡುತ್ತಿದೆ ಎಂದರು.

ವೇದಿಕೆಯಲ್ಲಿ ಧರ್ಮಾಭ್ಯುದಯ – ಧರ್ಮ ಶಿಕ್ಷಣ ಸಮಿತಿಯ ಕಾರ್ಯಕರ್ತರು ಹಾಗೂ ಶಿಕ್ಷಕರಿಗಾಗಿ ತರಬೇತಿ‌ ಕಾರ್ಯಾಗಾರ ನಡೆಸಲು ಶೃಂಗೇರಿಯಿಂದ ಆಗಮಿಸಿದ್ದ ವಿದ್ವಾನ್ ತೇಜಶಂಕರ ಸೋಮಯಾಜಿ ಉಪಸ್ಥಿತರಿದ್ದರು.

ಧರ್ಮಾಭ್ಯುದಯ ಸಂಘಟನೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಪ್ರಸ್ತಾವನೆಗೈದರು. ಶಿಕ್ಷಕಿ ಜ್ಯೋತಿ ವಂದಿಸಿದರು.‌ ಸಂಘಟನೆಯ ಉಪಾಧ್ಯಕ್ಷ ಆರ್. ಸಿ. ನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…