ಪುತ್ತೂರು: ಬಂಗರಸರ ಆಡಳಿತದಲ್ಲಿ ಆರಾಧ್ಯ ದೇವಿಯಾಗಿ ಗುರುತಿಸಿಕೊಂಡಿದ್ದ ಶ್ರೀ ಮಹಾಕಾಳಿ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಶನಿವಾರ ನಿಧಿಕುಂಭ ಮೆರವಣಿಗೆ ನಡೆಯಿತು.
ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನಿಧಿಕುಂಭದ ಮೆರವಣಿಗೆ ಹೊರಟಿತು.
ಮುಖ್ಯರಸ್ತೆಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಸಾಗಿ, ಕೋರ್ಟ್ ರಸ್ತೆಗೆ ಪ್ರವೇಶಿಸಿದ ಮೆರವಣಿಗೆ, ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಶ್ರೀ ಮಹಾಕಾಳಿ ದೇವಿಯ ಸಾನಿಧ್ಯವನ್ನು ತಲುಪಿತು.
ಮೆರವಣಿಗೆಯ ಮುಂಭಾಗದಿಂದ ಘೋಷ ವಾಹನ ಸಾಗಿದರೆ, ಅದನ್ನು ಅನುಸರಿಸಿ ನಿಧಿಕುಂಭದ ವಾಹನ ಸಾಗಿತು. ನಂತರ ಕುಣಿತ ಭಜನೆಯ ತಂಡ, ಭಕ್ತರು ಮೆರವಣಿಗೆಯಲ್ಲಿ ಸಾಗಿದರು.
ನಿಧಿಕುಂಭ ಸಾಗಿ ಬರುತ್ತಿದ್ದಂತೆ, ಮೆರವಣಿಗೆ ನಡುವೆಯೇ ಭಕ್ತರು ಚಿನ್ನ, ಬೆಳ್ಳಿ, ನಾಣ್ಯ, ಮುಷ್ಠಿ ಕಾಣಿಕೆ, ನವರತ್ನ, ತಾಮ್ರದ ನಾಣ್ಯ ಮೊದಲಾದ ಸುವಸ್ತುಗಳನ್ನು ಅರ್ಪಿಸುತ್ತಿರುವುದು ಕಂಡುಬಂದಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಹಸಂತ್ತಡ್ಕ, ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ಕಾಮತ್, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಖಜಾಂಚಿ ನಿತಿನ್ ಮಂಗಳ, ಅರ್ಚಕ ಬನ್ನಂಜೆ ರಾಮದಾಸ್ ಭಟ್, , ಭಾಮಿ ಅಶೋಕ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ನಾಳೆ ನಿಧಿಕುಂಭ ಪ್ರತಿಷ್ಠೆ:
ಮೇ 11ರಂದು ಬೆಳಿಗ್ಗೆ 8.26ಕ್ಕೆ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ, ದೇವಸ್ಥಾನದ ಅಭಿವೃದ್ಧಿ ನಿಧಿ ಸಂಗ್ರಹ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.