ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶರ ದೇವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ದೇವಳದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ವರ್ಷದಿಂದ ವರ್ಷಕ್ಕೆ ದೇವಳದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ. ಈ ಬಾರಿಯ ಶಿವರಾತ್ರಿಗೂ ಹಿಂದಿಗಿಂತ ಅಧಿಕ ಭಕ್ತರು ಆಗಮಿಸಿ, ಸೇವೆ ಸಲ್ಲಿಸಿದ್ದಾರೆ. ಬ್ರಹ್ಮರಥ ಸೇವೆ ಹಿಂದೆ 48 ಇದ್ದು, ಹಿಂದಿನ ವರ್ಷ 68ಕ್ಕೆ ತಲುಪಿತ್ತು. ಈ ವರ್ಷ ಈಗಲೇ 105 ಮಂದಿ ಹೆಸರು ನೋಂದಾಯಿಸಿದ್ದಾರೆ. ಇದು 150ಕ್ಕೆ ತಲುಪುವ ಸಾಧ್ಯತೆ ಇದೆ. ಹಾಗಾಗಿ ಜಾತ್ರಾ ಗದ್ದೆಯಲ್ಲಿ ಯಾವುದೇ ರೀತಿಯ ಚಪ್ಪರ, ಶಾಮಿಯಾನ ಹಾಕುವುದಿಲ್ಲ. ಬದಲಾಗಿ ಊಟದ ವ್ಯವಸ್ಥೆ ಮನೆ ತೆರವು ಮಾಡಿರುವ ಕೆರೆ ಪಕ್ಕದ ಜಾಗದಲ್ಲಿ ಮಾಡಲಾಗುವುದು. ಈಗಾಗಲೇ ಚಪ್ಪರ ಮುಹೂರ್ತ ನಡೆದಿದ್ದು, 20 ಸಾವಿರ ಚದರ ಮೀಟರ್ ಚಪ್ಪರ ನಿರ್ಮಾಣ ಆಗಲಿದೆ ಎಂದರು.
ಜನ ಹೆಚ್ಚು ಸೇರುತ್ತಿದ್ದಂತೆ ಕಳ್ಳತನ ಪ್ರಕರಣ ನಡೆಯುವುದು ಸಾಮಾನ್ಯ. ಮೊನ್ನೆ ಒಂದು ಘಟನೆ ನಡೆದಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕಣ್ಣಿಡಬೇಕು. ಅವಶ್ಯಕ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಹಾಕಲಾಗುವುದು ಎಂದರು.
ಪಾರ್ಕಿಂಗ್ ವ್ಯವಸ್ಥೆ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೆರೆ ಆಸುಪಾಸಿನ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ನೀಡುವುದೇ ಬೇಡ. ಆ ಜಾಗ ಹಾಗೇ ಇರಲಿ. ವಿಐಪಿಗಳಿಗೆ ಅಲ್ಲಿ ಪಾರ್ಕಿಂಗ್ ಎಂದು ಬೇಡ. ಇಲ್ಲುವರೆಗೆ ಆ ರೀತಿಯಲ್ಲಿ ಇರ್ಲಿಲ್ಲ ಎಂದ ಅವರು, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ವಿಚಾರಿಸಿದರು.
ಉತ್ತರಿಸಿದ ಟ್ರಾಫಿಕ್ ಪಿ.ಎಸ್.ಐ. ಉದಯರವಿ, ಹಿಂದಿನ ಬಾರಿಯಂತೆ ಕೊಂಬೆಟ್ಟು, ಎಪಿಎಂಸಿ, ತೆಂಕಿಲ ಹಾಗೂ ಕಿಲ್ಲೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.
ರಸ್ತೆ ವಿದ್ಯುತ್ ದೀಪಾಲಂಕಾರ, ಜಾತ್ರಾ ಗದ್ದೆ ವಿದ್ಯುತ್ ಸಂಪರ್ಕ, ನೆಟ್ ವರ್ಕ್ ಇಶ್ಯೂ!!
ಮೆಸ್ಕಾಂ ಪ್ರಭಾರ ಕಾರ್ಯನಿರ್ವಾಹಕ ಇಂಜಿನೀಯರ್ ರಾಮಚಂದ್ರ ಮಾತನಾಡಿ, ಜಾತ್ರಾ ಗದ್ದೆಯಲ್ಲಿ ಎಲ್ಲೆಂದರಲ್ಲಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಾರೆ. ಇದು ಅವಘಡಕ್ಕೆ ಕಾರಣವಾಗಲಿದೆ. ಹಾಗಾಗಿ ಜಾತ್ರಾ ಗದ್ದೆ ಗುತ್ತಿಗೆದಾರರೇ ಸಂಪರ್ಕ ಪಡೆದುಕೊಂಡು, ಅವರು ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ನೀಡಬೇಕು. ಹಾಗೆಯೇ, ರಸ್ತೆಯಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡುವವರಿಗೆ ಇದುವರೆಗೆ ಯಾವುದೇ ಕಂಡೀಷನ್ ಹಾಕಿರಲಿಲ್ಲ. ಇದರಿಂದ ಟ್ರಿಪ್ ಸಮಸ್ಯೆ ಎದುರಾಗುತ್ತದೆ. ಆ ಸಮಯದಲ್ಲಿ ಸಮಸ್ಯೆಯ ಮೂಲ ಹುಡುಕಲು ಆಗುವುದಿಲ್ಲ. ಆದ್ದರಿಂದ ದೀಪಾಲಂಕಾರಕ್ಕೆ ಪ್ರತ್ಯೇಕ ಜನರೇಟರ್ ಅಥವಾ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಸೂಚಿಸಬೇಕು ಎಂದರು. ಅದೇ ರೀತಿ, ದೇವಸ್ಥಾನಕ್ಕೆ ನೀಡಿದ ವಿದ್ಯುತ್ ಸಂಪರ್ಕದಿಂದ ಯಾರೂ ವಿದ್ಯುತ್ ಪಡೆದುಕೊಳ್ಳಕು ಅವಕಾಶ ನೀಡಬಾರದು. ಓವರ್ ಲೋಡ್ ಸಮಸ್ಯೆಯನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ ಎಂದ ಅವರು, ವಿದ್ಯುತ್ ಸಮಸ್ಯೆಯ ದೂರು ಆಲಿಸಲು ಜಾತ್ರಾ ಗದ್ದೆಯಲ್ಲಿ ನೆಟ್’ವರ್ಕ್ ಸಮಸ್ಯೆ ಎದುರಾಗುತ್ತದೆ ಎಂದು ಗಮನ ಸೆಳೆದರು.
ಬಸ್ ವ್ಯವಸ್ಥೆ:
16, 17ರಂದು ಪ್ರತಿವರ್ಷದಂತೆ ಈ ಬಾರಿಯೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ತಿಳಿಸಿದರು. ಪ್ರತಿಕ್ರಿಯಿಸಿದ ಶಾಸಕರು, ಉಳಿದ ದಿನಗಳಲ್ಲೂ ಹೆಚ್ಚುವರಿ ಬಸ್ ಹಾಕುವಂತೆ ಸೂಚಿಸಿದರು. ರಾತ್ರಿ 10 ಗಂಡೆವರೆಗೆ ಬಸ್ ವ್ಯವಸ್ಥೆ ಒದಗಿಸುವ ಬಗ್ಗೆ ತೀರ್ಮಾನಿಸಲಾಯಿತು.
ಡ್ರೋಣ್’ಗೆ ನಿರ್ಬಂಧ:
ಇತ್ತೀಚೆಗೆ ದೇವರ ಉತ್ಸವದ ವೇಳೆ ದೇವರ ಪ್ರಭಾವಳಿಗೆ ಡ್ರೋಣ್ ಅಪ್ಪಳಿಸಿದ ಘಟನೆ ನಡೆದಿದೆ. ಮಾತ್ರವಲ್ಲ, ಕೊಡಿ ಏರಿಸುವ ದಿನ ಹಾಗೂ ಬ್ರಹ್ಮರಥೋತ್ಸವದ ದಿನ ಡ್ರೋಣ್’ಗೆ ಅವಕಾಶ ಇಲ್ಲ. ಕೊಡಿ ಏರುವ ದಿನ ಗರುಡನ ಆಗಮನ ಆಗುತ್ತದೆ. ಡ್ರೋಣ್ ಬಳಸಿದರೆ ಗರುಡನ ಆಗಮನಕ್ಕೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ತುರ್ತು ಸಂದರ್ಭ ದೇವಳ ಗದ್ದೆಯಿಂದ ಹೊರ ಹೋಗಲು ವ್ಯವಸ್ಥೆ ಇರಬೇಕು ಎಂದು ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಗಮನ ಸೆಳೆದರು. ಜಾತ್ರಾ ಗದ್ದೆಗೆ ನೀರು ಹಾಕಲು ನಗರಸಭೆಗೆ ಸೂಚಿಸಲಾಯಿತು. ಅಲ್ಲದೇ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ತಿಳಿಸಲಾಯಿತು. ಶೌಚಾಲಯ ಕ್ಲಿನಿಂಗ್ ಮಾಡಿಸಲು ಹಾಗೂ ಪಕ್ಕದ ತೋಡನ್ನು ಶುಚಿಗೊಳಿಸಲು ತಿಳಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ್ ಸುವರ್ಣ, ಪಿ.ವಿ. ದಿನೇಶ್ ಕುಲಾಲ್, ಮಹಾಬಲ ರೈ ವಳತ್ತಡ್ಕ, ಈಶ್ವರ್ ಬೇಡೆಕರ್, ಸುಭಾಶ್ ರೈ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಪುರಂದರ ಹೆಗ್ಡೆ, ಸಿಐ ಸುನಿಲ್ ಕುಮಾರ್, ಪಿ.ಎಸ್.ಐ. ಸೇಸಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಲೋಕೋಪಯೋಗಿ ಇಲಾಖೆಯ ಪ್ರಮೋದ್, ಕಂದಾಯ ನಿರೀಕ್ಷಕ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.