ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದಾಳಿ ನಡೆಸಿದ್ದ ಆರೋಪಿಗಳ ಮೊದಲ ಫೋಟೋವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಬಹಿರಂಗವಾದ ಫೋಟೋದಲ್ಲಿ ಇಬ್ಬರು ಆರೋಪಿಗಳು ಕಂಡುಬಂದಿದ್ದಾರೆ. ಆರೋಪಿಗಳು ಬಿಳಿ ಬಣ್ಣದ ಶರ್ಟ್ ಧರಿಸಿರುವುದು ಕಂಡುಬಂದಿದ್ದು, ಅವರಲ್ಲಿ ಒಬ್ಬ ಟೋಪಿ ಧರಿಸಿದ್ದಾನೆ. ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಈಗಾಗಲೇ ಹಲವು ತಂಡಗಳನ್ನ ರಚಿಸಿದ್ದಾರೆ. ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಸ್ಟ್ ಪ್ರಕಟವಾಗಿತ್ತು. ಹೀಗಾಗಿ ಪಲೀಸರು ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 109(1) (ಕೊಲೆ ಯತ್ನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಾಳಿಯ ಬೆನ್ನಲ್ಲೇ ಮುಂಬೈ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ದಾಳಿ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ,
ನಟ ಟೈಗರ್ ಶ್ರಾಫ್ ಮುಂಬೈನ ಜುಹು ಪ್ರದೇಶದಲ್ಲಿ ಅ. 18ರ ಸಂಜೆ ಫುಟ್‌ಬಾಲ್ ಮೈದಾನದಿಂದ ತಮ್ಮ ಕಾರಿನಲ್ಲಿ ಹೊರಟಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನು ಗುರಿಯಾಗಿಸಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಟೈಗರ್ ಶ್ರಾಫ್ ಯಾವುದೇ ಗಾಯಗಳಾಗಿಲ್ಲ. ಆದರೆ ಅವರ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.






















