ಇರಾನ್ ಯುದ್ಧದಿಂದ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪರಿಸ್ಥಿತಿ ಅವಲೋಕಿಸಲು, ಅದರಲ್ಲೂ ಎಲ್ಪಿಜಿ ಸರಬರಾಜು ಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಸಭೆ ನಡೆಸಿದರು.
ಭಾರತದಲ್ಲಿ ಎಲ್ಪಿಜಿ ಸರಬರಾಜು ಸರಿಯಾದ ರೀತಿಯಲ್ಲಿ ಇರುವುದನ್ನು ಖಾತ್ರಿಪಡಿಸಲು ಸರ್ಕಾರ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಸರ್ಕಾರ ಇಂದು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್ಪಿಜಿ ಉತ್ಪಾದನೆ ಹೆಚ್ಚಿಸಲು ಹಾಗೂ ಹೈಡ್ರೋಕಾರ್ಬನ್ಗಳನ್ನು ಎಲ್ಪಿಜಿ ಸಂಗ್ರಹಕ್ಕೆ ಸೇರಿಸುವಂತೆ ದೇಶದಲ್ಲಿರುವ ರಿಫೈನರಿಗಳು ಹಾಗೂ ಪೆಟ್ರೋಕೆಮಿಕನ್ ಘಟಕಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಪಿಜಿ ಸರಬರಾಜು ಕುಂಠಿತವಾಗದಂತೆ ಎಚ್ಚರವಹಿಸಲು ನೈಸರ್ಗಿಕ ಅನಿಲವನ್ನು ಸಮರ್ಪಕವಾಗಿ ಬಳಸುವಂತಹ ವ್ಯವಸ್ಥೆಯನ್ನು ಎಸೆನ್ಷಿಯಲ್ ಕಮಾಡಿಟೀಸ್ ಆ್ಯಕ್ಟ್ ಮೂಲಕ ಮಾಡಲಾಗುತ್ತಿದೆ. ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಗೃಹಬಳಕೆಯ ಪಿಎನ್ಜಿ (ಕೊಳವೆ ಅನಿಲ) ಮತ್ತು ವಾಹನ ಬಳಕೆಯ ಸಿಎನ್ಜಿ ಅನಿಲಗಳ ಸರಬರಾಜು ನೂರಕ್ಕೆ ನೂರು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇತರ ಸರಕುಗಳಾದರೆ ಕಳೆದ ಆರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಸರಬರಾಜು ಮಿತಿ ಹಾಕಲಾಗುತ್ತದೆ.
ಇಂಡಿಯನ್ ಆಯಿಲ್, ಹೆಚ್ಪಿ, ಬಿಪಿ ಇತ್ಯಾದಿ ಒಎಂಸಿಗಳು ಎಲ್ಪಿಜಿ ಉತ್ಪಾದನೆ ಪ್ರಮಾಣ ಹೆಚ್ಚಿಸಿವೆ.
‘ಜಾಗತಿಕ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ತೈಲ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಎಲ್ಪಿಜಿ ಲಭ್ಯತೆಯನ್ನು ಖಚಿತಪಡಿಸಲು ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ’ ಎಂದು ತೈಲ ಮಾರುಕಟ್ಟೆ ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಜಗತ್ತಿನ ಅರ್ಧಕ್ಕಿಂತ ಹೆಚ್ಚು ತೈಲ ಪೂರೈಕೆ ಮಾಡುವ ಪಶ್ಚಿಮ ಏಷ್ಯಾ ಭಾಗದಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಇದರಿಂದ ತೈಲ ಉತ್ಪಾದನೆ ನಿಂತು ಹೋಗಿರುವುದು ಮಾತ್ರವಲ್ಲ, ತೈಲ ಸಾಗಣೆಯೂ ಸ್ಥಗಿತಗೊಂಡಿದೆ. ಗಲ್ಫ್ ಪ್ರದೇಶದಿಂದ ತೈಲ ಸಾಗಣೆಯ ಹಾದಿಯಲ್ಲಿರುವ ಹಾರ್ಮುಜ್ ಜಲಸಂಧಿ ಸದ್ಯ ಬಹುತೇಕ ತಡೆ ಹೊಂದಿದೆ. ಇದರಿಂದಾಗಿ ಗಲ್ಫ್ನಿಂದ ಯಾವ ತೈಲವೂ ಹೊರಬರಲು ಆಗುತ್ತಿಲ್ಲ. ಭಾರತದಲ್ಲಿ ಕಚ್ಚಾ ತೈಲದ ಸಂಗ್ರಹ ಉತ್ತಮ ಪ್ರಮಾಣದಲ್ಲಿದೆಯಾರೂ, ಎಲ್ಪಿಜಿ, ಎಲ್ಎನ್ಜಿ ಇತ್ಯಾದಿ ಅನಿಲಗಳ ಕೊರತೆ ಎದುರಾಗಿದೆ.























