ಮಂಗಳೂರು:ರಾಷ್ಟ್ರೀಯ ಭಾವನೆ ಮತ್ತು ಕರಾವಳಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಸಿಐಎಸ್‌ಎಫ್ ‘ವಂದೇ ಮಾತರಂ’ ಕೋಸ್ಟಲ್ ಸೈಕ್ಲೋಥಾನ್-2026 ಫೆಬ್ರವರಿ 18ರಂದು ಮಂಗಳೂರಿಗೆ ಆಗಮಿಸಲಿದೆ. ‘ವಂದೇ ಮಾತರಂ’ 150ನೇ ವಾರ್ಷಿಕೋತ್ಸವದ ಅಂಗವಾಗಿ ಈ ಐತಿಹಾಸಿಕ ಸೈಕ್ಲೋಥಾನ್ ದೇಶದ ಕರಾವಳಿ ಭಾಗಗಳ ಮೂಲಕ ಸಾಗುತ್ತಿದೆ.
ಜನವರಿ 28ರಂದು ಆರಂಭಗೊಂಡ ಈ ಸೈಕ್ಲೋಥಾನ್ ಫೆಬ್ರವರಿ 21ರಂದು ಕೊಚ್ಚಿಯಲ್ಲಿ ಸಮಾರೋಪಗೊಳ್ಳಲಿದೆ. ರಾಷ್ಟ್ರೀಯ ಏಕತೆ, ಕರಾವಳಿ ಭದ್ರತೆ, ಕರಾವಳಿ ಪ್ರದೇಶಗಳ ಸಬಲೀಕರಣ ಮತ್ತು ಸತತ ಅಭಿವೃದ್ಧಿ ಕುರಿತ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ವರ್ಷಪೂರ್ತಿ ನಡೆಯುವ ಈ ಜನಜಾಗೃತಿ ಅಭಿಯಾನದಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ, ಪರಿಸರ ಸಂರಕ್ಷಣೆ ಹಾಗೂ ಕರಾವಳಿ ಸಮುದಾಯಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಾಗುತ್ತಿದೆ. ವಿಶೇಷವಾಗಿ 65 ಮಹಿಳಾ ಸೈಕ್ಲಿಸ್ಟ್‌ಗಳು ಸೇರಿದಂತೆ 130ಕ್ಕೂ ಹೆಚ್ಚು ಸಹಾಯಕ ಸಿಬ್ಬಂದಿ ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.
ಸೈಕ್ಲೋಥಾನ್ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕರಾವಳಿ ಕೇಂದ್ರೀಕೃತ 52 ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿ ಭದ್ರತೆ, ಕೌಶಲಾಭಿವೃದ್ಧಿ, ಜೀವನೋಪಾಯ ವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.ಫೆಬ್ರವರಿ 18ರಂದು ಸಂಜೆ 7 ಗಂಟೆಗೆ ಪಣಂಬೂರು ಬೀಚ್‌ನಲ್ಲಿ ಸೈಕ್ಲೋಥಾನ್ ತಂಡಕ್ಕೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 19ರಂದು ಮಂಗಳೂರಿನಿಂದ ಸೈಕ್ಲೋಥಾನ್ ಮುಂದಿನ ಗಮ್ಯಸ್ಥಾನದತ್ತ ಪ್ರಯಾಣ ಮುಂದುವರಿಸಲಿದೆ ಎಂದು ಎಸ್‌ಎಫ್‌ಎಫ್ ಎನ್‌ಎಂಪಿ ಘಟಕದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















