ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಕುನ್ನತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಕಿಸ್ತಾನ ಮುಕ್ಕು (ಜಂಕ್ಷನ್) ಎಂಬ ಗ್ರಾಮದ ಹೆಸರು ಇದೀಗ ವಿವಾದದ ಕೇಂದ್ರವಾಗಿ ಹೊರಹೊಮ್ಮಿದೆ.
ಕೂಡಲೇ ಗ್ರಾಮದ ಹೆಸರು ಬದಲಿಸಬೇಕು. ಗ್ರಾಮದಲ್ಲಿ ಸರ್ಕಾರ ಹಾಕಿರುವ ಬೋರ್ಡ್ ಬದಲಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಮುಸ್ಲಿಮರೇ ಹೆಚ್ಚಾಗಿರುವ ಸಣ್ಣ ಪ್ರದೇಶ ವೊಂದಕ್ಕೆ 7 ದಶಕಗಳ ಹಿಂದೆಯೇ ಬಸ್ ಸಂಪರ್ಕವಿತ್ತು. ಆಗ ಬಸ್ ಚಾಲಕನಾಗಿದ್ದ ನೀಲ ಕಂಠ ಪಿಳ್ಳೆ ಗ್ರಾಮಕ್ಕೆ ಬಂದು ಬಸ್ ನಿಲ್ಲಿಸಿದಾಕ್ಷಣ ಇಲ್ಲಿಗೆ ಬಂದರೆ ಪಾಕಿಸ್ತಾನಕ್ಕೆ ಬಂದ ಹಾಗೆ ಆಗುತ್ತದೆ ಎಂದು ತಮಾಷೆಗೆ ಹೇಳಿದ್ದರಂತೆ. ಬಳಿಕ ಆ ಗ್ರಾಮ ಅಥವಾ ಬಸ್ ನಿಲ್ಲುವ ಜಾಗಕ್ಕೆ ಪಾಕಿಸ್ತಾನ್ ಮುಕ್ಕು (ಪಾಕಿಸ್ತಾನ ಜಂಕ್ಷನ್) ಎಂದು ಅಘೋಷಿತವಾಗಿ ನಾಮ ಕರಣವಾಗಿತ್ತು.
ಹಳೆಯ ಹೆಸರಾದ “ನಿರ್ವಾತುಮುಕ್ಕು’ ಮರೆತೇ ಹೋಗಿತ್ತು. ಆದರೆ ಪಹಲ್ಲಾಂ ದಾಳಿಯ ಬಳಿಕ, ಗ್ರಾಮದ ಹೆಸರಿನಿಂದ ಪಾಕಿಸ್ತಾನ ತೆಗೆದು ಹಾಕಬೇಕು ಎನ್ನುವ ಆಗ್ರಹ ಕೇಳಿಬಂದು, ಹೆಸರು ಬದಲಾವಣೆ ಕೋರಿ ಗ್ರಾಪಂ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪ್ರಸ್ತಾವ ಜಾರಿಗೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಗ್ರಾಮದ ರಸ್ತೆ ರಿಪೇರಿ ಬಳಿಕ ಅಲ್ಲಿ ದೊಡ್ಡದಾಗಿ ಪಾಕಿಸ್ತಾನ್ ಮುಕ್ಕು ಎಂದು ಬೋರ್ಡ್ ಹಾಕಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ, ಆಡಳಿತಕ್ಕೆ ಒಳಪಟ್ಟಿರುವ ‘ಸಿಪಿಎಂ ಕೇರಳದಲ್ಲಿಆಪರೇಷನ್ ಸಿಂದೂರ ಸಂಭ್ರಮಿಸಲಾಗದು. ಆದರೆ ಒಂದು ಪ್ರದೇಶಕ್ಕೆ ಪಾಕಿಸ್ತಾನದ ಹೆಸರನ್ನು ಹೆಮ್ಮೆಯಿಂದ ಇಡಬಹುದು. ಆ ಹೆಸರನ್ನು ಬದಲಿಸುವ ಬಿಜೆಪಿ ಯತ್ನಕ್ಕೆ ಸ್ಥಳೀಯರು ಬೆಂಬಲಿಸಿದರಾದರೂ ಕಮ್ಯುನಿಸ್ಟ್ ಸರ್ಕಾರ ಒಪ್ಪಲಿಲ್ಲ. ಸಾಲದ್ದಕ್ಕೆ ಈಗ ಬೋರ್ಡ್ ಕೂಡ ಹಾಕಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

























