ಪುತ್ತೂರು: ಪೊಲೀಸ್ ಸಿಬ್ಬಂದಿಗಳ ವೃತ್ತಿಜೀವನದ ಜೊತೆಗೆ ಅವರ ವೈಯಕ್ತಿಕ ಪ್ರಗತಿಗೂ ಉತ್ತೇಜನ ನೀಡುವ ಉದ್ದೇಶದಿಂದ, ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಎಎಸ್–ಐಪಿಎಸ್ ಸೇರಿದಂತೆ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಫೆಬ್ರವರಿ 18ರಂದು ಸಂಜೆ ಆಯೋಜಿಸಲಾಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ, ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗದಲ್ಲಿ ‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನದ ಅಂಗವಾಗಿ ಈ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಾನ್ಸನ್ ಕಿರಣ್ ಡಿ ಸೋಜಾ ಅವರು, ಪೊಲೀಸ್ ಸಿಬ್ಬಂದಿಗಳ ಜೊತೆಗೆ ಅವರ ಮಕ್ಕಳೂ ಭವಿಷ್ಯದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗುವ ದಿಸೆಯಲ್ಲಿ ಈ ರೀತಿಯ ಕಾರ್ಯಾಗಾರಗಳು ಮಾರ್ಗದರ್ಶಕವಾಗಲಿವೆ ಎಂದು ಅಭಿಪ್ರಾಯಪಟ್ಟರು.ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಕ್ರಪಾಣಿ ಅವರು, ಇಂತಹ ಜಾಗೃತಿ ಕಾರ್ಯಕ್ರಮಗಳು ಸಿಬ್ಬಂದಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿ, ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿವೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ್ ಮಾತನಾಡಿ, ಪೊಲೀಸ್ ಠಾಣೆಯಲ್ಲಿಯೇ ಪೊಲೀಸ್ ಸಿಬ್ಬಂದಿಗಾಗಿ ಐಎಎಸ್–ಐಪಿಎಸ್ ಪರೀಕ್ಷೆಗಳ ಕುರಿತ ಕಾರ್ಯಾಗಾರವನ್ನು ಸಾಹಿತ್ಯ ಪರಿಷತ್ ಆಯೋಜಿಸಿರುವುದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿರಬಹುದು ಎಂದು ಶ್ಲಾಘಿಸಿದರು.ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಅವರು, ಸೇವಾ ಅವಧಿಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮೂಲಕ ಆಡಳಿತ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಐಎಎಸ್ ದರ್ಶನ್ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಅವರು, ಐಎಎಸ್, ಐಪಿಎಸ್ ಹಾಗೂ ಇತರೆ ತತ್ಸಮಾನ ಪರೀಕ್ಷೆಗಳ ಸಿದ್ಧತಾ ವಿಧಾನ, ಅಧ್ಯಯನ ಯೋಜನೆ, ಸಮಯ ನಿರ್ವಹಣೆ ಮತ್ತು ಯಶಸ್ಸಿನ ಮಾರ್ಗಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಆಸಕ್ತಿ ಹೊಂದಿರುವ ಪೊಲೀಸ್ ಸಿಬ್ಬಂದಿಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸಬ್ ಇನ್ಸ್‌ಪೆಕ್ಟರ್ ಚಕ್ರಪಾಣಿ ಹಾಗೂ ಐಎಎಸ್ ಕನಸು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ದರ್ಶನ್ ಗರ್ತಿಕೆರೆ ಅವರನ್ನು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಸನ್ಮಾನಿಸಲಾಯಿತು.
ಪೊಲೀಸ್ ಸಿಬ್ಬಂದಿ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಅಗತ್ಯತೆಯನ್ನು ವಿವರಿಸಿದರು. ಕಾರ್ಯದರ್ಶಿ ಅಭಿಶ್ ವಂದಿಸಿದರು. ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಸಂಯೋಜಿಸಿ ನಿರೂಪಿಸಿದರು.






















