ಶಿಕ್ಷಣ

ಸೇಂಟ್ ಫಿಲೊಮಿನಾ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ | ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಸೇಂಟ್ ಫಿಲೊಮಿನಾ ಕಾಲೇಜಿನ (ಸ್ವಾಯತ್ತ) ಸ್ಪಂದನ ಹಾಲ್‌ನಲ್ಲಿ ಜನವರಿ 30ರಂದು ಹುತಾತ್ಮರ ದಿನವನ್ನು ಆಚರಿಸಲಾಯಿತು.

chennai-shopping
maithri

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲ ಹೋರಾಟಗಾರರಿಗೆ ಗೌರವ ಸಲ್ಲಿಸಲಾಯಿತು. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಕೈಗೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಗಾಂಧೀಜಿಯವರ ತತ್ತ್ವಗಳು ಇಂದಿನ ಸಮಕಾಲೀನ ಸಮಾಜದಲ್ಲಿಯೂ ಎಷ್ಟು ಪ್ರಸ್ತುತವಾಗಿವೆ ಎಂಬುದನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್, ಹುತಾತ್ಮರ ದಿನದ ಮಹತ್ವದ ಕುರಿತು ಅಭಿಪ್ರಾಯ ಹಂಚಿಕೊಂಡರು.

ಮುಖ್ಯ ಭಾಷಣ ಮಾಡಿದ ಎಂ.ಎಸ್‌ಸಿ (ಗಣಿತ) ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀದೇವಿ ಎನ್., ಸ್ವಾತಂತ್ರ್ಯೋತ್ತರ ಭಾರತ ಮತ್ತು ಇಂದಿನ ಭಾರತದ ನಡುವಿನ ಅರ್ಥಪೂರ್ಣ ಹೋಲಿಕೆಯನ್ನು ಮಾಡಿದರು. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ದೇಶ ಎದುರಿಸಿದ ಸವಾಲುಗಳನ್ನು ವಿವರಿಸಿ, ಇಂದಿನ ಸ್ವತಂತ್ರ ರಾಷ್ಟ್ರದ ಅವಕಾಶಗಳು ಹಾಗೂ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಸ್ವಾತಂತ್ರ್ಯದ ಮೌಲ್ಯವನ್ನು ಅರಿತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ಪಿಯರ್ಲ್ ಫಿಯೋನಾ ಪೆರೇರಾ ಉಪಸ್ಥಿತರಿದ್ದರು.

ಅವನಿ, ಅಪರ್ಣಾ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೂಸಫ್ ಅಲ್ಫಾಜ್ ಸ್ವಾಗತಿಸಿ, ಸಂಯುಕ್ತ ಕಾರ್ಯದರ್ಶಿ ಹಿಬಾ ಶೇಖ್ ವಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಜಮ್ಮಿಲ್ ಐ. ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts