ಪುತ್ತೂರು: ಸಂಪ್ಯ ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಅಕ್ಷಯ ಕಾಲೇಜಿನ 2025-26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಾಗೂ ಈ ವರ್ಷದಿಂದ ಕಾರ್ಯನಿರ್ವಹಿಸಲಿರುವ ಅಕ್ಷಯ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ವಿದ್ಯಾರ್ಥಿಗಳಿಗೆ ದೃಷ್ಟಿ- 2025 ಒಂದು ದಿನದ ತರಬೇತಿ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ಜರಗಿತು.

ಪ್ರಸಕ್ತ ಕಾಲಮಾನದ ಶಿಕ್ಷಣದ ಸವಾಲುಗಳ ಅರಿವು ಮೂಡಿಸುವ ಸಲುವಾಗಿ, ಕಾಲೇಜಿನ ಶಿಕ್ಷಕ ರಕ್ಷಕ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸೆಯ ಕೋಶ ಕಾರ್ಯಕ್ರಮ ಆಯೋಜಿಸಿತ್ತು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶವನ್ನು ತಿಳಿಯಪಡಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಖ್ಯಾತ ಶಿಕ್ಷಣ ತಜ್ಞರು ಮತ್ತು ವಿಶ್ವಸಂಸ್ಥೆಯ ಭಾರತೀಯ ಪ್ರಾದೇಶಿಕ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್. ಪಿ. ಅವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರಸಕ್ತ ಕಾಲದ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಶೈಕ್ಷಣಿಕ ಕ್ಷೇತ್ರದ ಸವಾಲುಗಳ ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಜೀವನ ಮೌಲ್ಯಗಳು ಹಾಗೂ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾಲೇಜಿನ ನೀತಿ ನಿಯಮಗಳ ಬಗ್ಗೆ ಕಾಲೇಜಿನ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ. ಮತ್ತು ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ವಿವರಿಸಿದರು.
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಉಪಸ್ಥಿತರಿದ್ದರು. ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಸ್ವಾಗತಿಸಿದರು. ಉಪಪ್ರಾಂಶುಪಾಲ ರಕ್ಷಣ ಟಿ.ಆರ್. ವಂದಿಸಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಪ್ರಭಾ ಕೆ. ಕಾರ್ಯಕ್ರಮ ನಿರೂಪಿಸಿದರು.
























