ಮಂಗಳೂರು: ಟೀಮ್ ಮಂಗಳೂರು, ONGC MRPL ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ “ಕರಾವಳಿ ಉತ್ಸವ”ದ ಭಾಗವಾಗಿ ಜನವರಿ 18 ಮತ್ತು 19 ರಂದು ತಣ್ಣೀರು ಬಾವಿ ಕಡಲ ತೀರದಲ್ಲಿ 8ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿದೆ.
ಈ ಉತ್ಸವದಲ್ಲಿ ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಗ್ಲೋವೇನಿಯ, ಇಟಲಿ, ಎಸ್ಟೋನಿಯ, ಸ್ವೀಡನ್, ಇಂಡೋನೇಷಿಯ, ಪೋರ್ಚುಗಲ್ ಮುಂತಾದ ದೇಶಗಳ ಗಾಳಿಪಟ ತಂಡಗಳು ಮತ್ತು ಓಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯಗಳ ತಂಡಗಳು ವಿವಿಧ ಗಾತ್ರ, ವಿನ್ಯಾಸ ಮತ್ತು ಬಣ್ಣಗಳ ಗಾಳಿಪಟಗಳನ್ನು ಹಾರಿಸಲಿವೆ.
ಮಂಗಳೂರು ತಂಡವು ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಗ್ ಕಾಂಗ್, ದುಬೈ, ಕತಾರ್ ಮುಂತಾದ ದೇಶಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದೆ.
“ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ” ಎಂಬ ಧೈಯವಾಕ್ಯದೊಂದಿಗೆ ಈ ಉತ್ಸವವು ದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶವನ್ನು ಹೊಂದಿದೆ. ಸ್ಟಂಟ್ ಗಾಳಿಪಟಗಳು, ಎರೋಫಾಯ್ಸ್ ಗಾಳಿಪಟಗಳು, ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ಮತ್ತು ರೆಕ್ಕೆ ಬಿಚ್ಚಿ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಮನರಂಜನೆಗೆ ಸೂತ್ರವಾಗಲಿವೆ.
ಜಿಲ್ಲಾಧಿಕಾರಿ ಶ್ರೀ ಮುಲೈ ಮುಗಿಲನ್ ಶನಿವಾರ ಸಂಜೆ 5 ಗಂಟೆಗೆ ಈ ಗಾಳಿಪಟ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ 3 ರಿಂದ ರಾತ್ರಿ 9 ರವರೆಗೆ ಈ ಉತ್ಸವ ನಡೆಯಲಿದೆ.