ಮಂಗಳೂರು,: ಕರಾವಳಿ ಭಾಗದ ಜನರು ಹಾಗೂ ಅನಿವಾಸಿ ಭಾರತೀಯರ ಬಹುಕಾಲದ ನಿರೀಕ್ಷೆಯಾಗಿದ್ದ ಮಂಗಳೂರು ಮತ್ತು ಮಸ್ಕತ್ ನಡುವೆ ನೇರ ವಿಮಾನ ಸೇವೆ ಮತ್ತೆ ಆರಂಭವಾಗುತ್ತಿದ್ದು,ಮಾರ್ಚ್ 1ರಿಂದ ಈ ಸೇವೆ ಲಭ್ಯವಾಗಲಿದೆ.
ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ಬಗ್ಗೆ ಮಾಹಿತಿ ನೀಡಿದ್ದು, ಏರ್ ಇಂಡಿಯಾ ಎಕ್ಸಪ್ರೆಸ್ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕೇರಳ ಭಾಗಗಳಿಂದ ಉದ್ಯೋಗ ಮತ್ತು ವ್ಯಾಪಾರ ಉದ್ದೇಶಕ್ಕಾಗಿ ಮಸ್ಕತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಿರುವ ಹಿನ್ನೆಲೆಯಲ್ಲಿ ನೇರ ವಿಮಾನ ಸಂಪರ್ಕಕ್ಕೆ ಭಾರಿ ಬೇಡಿಕೆ ಇತ್ತು.ಸಂಸದರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸೇವೆಯನ್ನು ಪುನರಾರಂಭಿಸಲು ಮನವಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ವಾರಕ್ಕೆ ಎರಡು ದಿನ ಹಾರಾಟ
ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ವಾರಕ್ಕೆ ಎರಡು ಬಾರಿ — ಭಾನುವಾರ ಮತ್ತು ಮಂಗಳವಾರ — ನೇರ ಹಾರಾಟ ನಡೆಯಲಿದೆ. ಇದರೊಂದಿಗೆ ಮಧ್ಯಂತರ ನಗರಗಳ ಮೂಲಕ ಪ್ರಯಾಣಿಸುವ ಅವಶ್ಯಕತೆ ತಪ್ಪಿ, ಸಮಯ ಹಾಗೂ ವೆಚ್ಚದಲ್ಲಿ ಪ್ರಯಾಣಿಕರಿಗೆ ಲಾಭವಾಗಲಿದೆ.ಹಿಂದೆ ಈ ಮಾರ್ಗದ ಸೇವೆ ಸ್ಥಗಿತಗೊಂಡಿದ್ದರಿಂದ ಅನೇಕರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಪ್ರಯಾಣಿಸಬೇಕಾಗಿತ್ತು.ಈ ಮಹತ್ವದ ಸಂಪರ್ಕ ಪುನರಾರಂಭಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.ನೇರ ವಿಮಾನಯಾನ ಸೇವೆಯು ಕರಾವಳಿ ಭಾಗ ಮತ್ತು ವಿದೇಶ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.






















