ಕರಾವಳಿ

ಮಂಗಳೂರಿನಲ್ಲಿ ಮಕ್ಕಳ ಕಳ್ಳರ ವದಂತಿ – ವೈರಲ್ ಸಂದೇಶಗಳಿಗೆ ಕಮಿಷನರ್ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದ ಕುಂಟಿಕಾನ ಪ್ರದೇಶದಲ್ಲಿ ಮಕ್ಕಳ ಅಪಹರಣ ತಂಡ ಸಂಚರಿಸುತ್ತಿದೆ ಎಂಬ ಸಂದೇಶಗಳು ಶುಕ್ರವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.ಇವು ಸಂಪೂರ್ಣ ವದಂತಿಗಳಾಗಿದ್ದು ಸಾರ್ವಜನಿಕರು ಗಾಬರಿಯಾಗಬಾರದು ಎಂದು ತಿಳಿಸಿದ್ದಾರೆ.

ಘಟನೆ ವಿವರ:

ಪೊಲೀಸರ ಮಾಹಿತಿ ಪ್ರಕಾರ, ಗುರುವಾರ ಸಂಜೆ ಕುಂಟಿಕಾನದಲ್ಲಿ ನಡೆದ ಸಣ್ಣ ಘಟನೆ ಒಂದು ತಪ್ಪು ಅರ್ಥೈಸಿಕೆಗೆ ಕಾರಣವಾಗಿತ್ತು. ರಸ್ತೆಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾದೊಳಗೆ ಮಕ್ಕಳ ಅಳುವ ಧ್ವನಿ ಕೇಳಿದಂತೆ ಅನಿಸಿದ ಬಾಲಕನೊಬ್ಬ ತನ್ನ ಸ್ನೇಹಿತನಿಗೆ “ಮಕ್ಕಳ ಕಳ್ಳರು ಬಂದಿದ್ದಾರೆ” ಎಂದು ಹೇಳಿದ್ದಾನೆ. ಈ ಮಾತು ಮಾತಿಗೆ ಬೆಳೆದು ಪರಿಚಯದ ಮಹಿಳೆಯೊಬ್ಬರ ಬಳಿ ತಲುಪಿದ್ದು, ಅವರು ವಾಟ್ಸ್‌ಆಪ್‌ನಲ್ಲಿ ವಾಯ್ಸ್ ಮೆಸೇಜ್ ಹಂಚಿಕೊಂಡಿದ್ದರು.

ಇದನ್ನು ಮತ್ತಷ್ಟು ಜನರಿಗೆ ಫಾರ್ವರ್ಡ್ ಮಾಡಲಾಗಿದ್ದು, ಸ್ಥಳೀಯ ಅಂಗನವಾಡಿ ಶಿಕ್ಷಕಿಯೊಬ್ಬರೂ ಎಚ್ಚರಿಕೆ ನೀಡುವ ಉದ್ದೇಶದಿಂದ ಮತ್ತೊಂದು ವಾಯ್ಸ್ ಮೆಸೇಜ್ ಹಂಚಿಕೊಂಡಿದ್ದರು. ಪರಿಣಾಮವಾಗಿ ಹಲವಾರು ವಾಟ್ಸ್‌ಆಪ್ ಗುಂಪುಗಳಲ್ಲಿ ಸಂದೇಶ ಹರಿದಾಡಿ, ಪ್ರದೇಶದಲ್ಲಿ ಅನಾವಶ್ಯಕ ಭೀತಿ ವಾತಾವರಣ ನಿರ್ಮಾಣಗೊಂಡಿತ್ತು.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಬಾಲಕನನ್ನು ವಿಚಾರಣೆ ಮಾಡಿದ ಬಳಿಕ, ಯಾವುದೇ ಅಪಹರಣ ಘಟನೆ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು. ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಸಾಮಾನ್ಯ ಪ್ರಯಾಣಿಕರಾಗಿದ್ದು, ಮಕ್ಕಳ ಅಳುವ ಧ್ವನಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು, ದೃಢೀಕರಣವಿಲ್ಲದ ಸುದ್ದಿಗಳನ್ನು ಹಂಚಿಕೊಳ್ಳಬಾರದು ಹಾಗೂ ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದಲ್ಲಿ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ಪರಿಶೀಲಿಸದೇ ಫಾರ್ವರ್ಡ್ ಮಾಡುವುದು ಕಾನೂನುಬದ್ಧ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ಮರೆಯಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಅಸ್ತಿತ್ವಕ್ಕೆ | ಮಾರ್ಚ್ 3ರಂದು ಸಾಮೂಹಿಕ ಧರಣಿಗೆ ನಿರ್ಧಾರ!

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ "ಬ್ರಹ್ಮರಕೂಟ್ಲು ಟೋಲ್ ಗೇಟ್…

ಮಂಗಳೂರಿನಲ್ಲಿ ರಾಜ್ಯದ ಮೊದಲ ಬೋಟ್ ಆಂಬ್ಯುಲೆನ್ಸ್ | ಸರ್ಕಾರದ ನೆರವಿಗೆ ಕಾಯದೇ, ಮೀನುಗಾರರೇ ರೂಪಿಸಿದ ಯೋಜನೆ!

ಮಂಗಳೂರು: ಸಮುದ್ರದಲ್ಲಿನ ತುರ್ತು ಅವಘಡಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು…