ಕರಾವಳಿ

ಜನ್ ಧನ್ ಜಾರಿಗೆ ಮೊದಲೇ ಬ್ಯಾಂಕ್ ಖಾತೆ ಹೊಂದಿದ್ದ ಜಿಲ್ಲೆಯ ಜನ! ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 17ನೇ ಶಾಖೆಯನ್ನು ಈಶ್ವರಮಂಗಲದಲ್ಲಿ ಉದ್ಘಾಟಿಸಿದ ಮಾಜಿ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜನ್ ಧನ್ ಯೋಜನೆ ಜಾರಿಯಾಗುವ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯ ಶೇ. 80ರಷ್ಟು ಜನರು ಬ್ಯಾಂಕ್ ಖಾತೆ ಹೊಂದಿದ್ದರು. ಜನಸಾಮಾನ್ಯರು ಬ್ಯಾಂಕ್ ಮೆಟ್ಟಿಲು ಹತ್ತಿ, ಖಾತೆ ತೆರೆಯುವಂತಾಗಲು ಕಾರಣರಾದವರು ಮೊದಲಿಗೆ ಜನಾರ್ದನ ಪೂಜಾರಿ, ನಂತರ ನರೇಂದ್ರ ಮೋದಿ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 17ನೇ ಶಾಖೆಯಾದ ಈಶ್ವರಮಂಗಲ ಶಾಖೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಜನ್ ಧನ್ ಯೋಜನೆಯನ್ನು ಜಾರಿಗೆ ತರುವಾಗ ತಾನು ಲೋಕಸಭಾ ಸದಸ್ಯನಾಗಿದ್ದೆ. ಬ್ಯಾಂಕ್ ಅಧಿಕಾರಿಗಳನ್ನು ಕರೆದು ಸಭೆ ಕರೆದಾಗ ಒಂದು ಉಪಯುಕ್ತ ಮಾಹಿತಿ ದೊರೆಯಿತು. ಅದೇನೆಂದರೆ, ಆಗಲೇ ದಕ್ಷಿಣ ಕನ್ನಡದ ಶೇ. 80ರಷ್ಟು ಜನರು ಬ್ಯಾಂಕ್ ಖಾತೆ ಹೊಂದಿದ್ದರು. ಇದಕ್ಕೆ ಕಾರಣ ಸಹಕಾರಿ ರಂಗ. ಮೊಳಹಳ್ಳಿ ಶಿವರಾಯ ರಾವ್ ಅವರಿಂದ ಸವಣೂರು ಸೀತಾರಾಮ ರೈ ಅವರವರೆಗೆ ಕೊಡುಗೆ ಎಲ್ಲರನ್ನು ಸ್ಮರಿಸಿಕೊಳ್ಳಲೇಬೇಕು. ಇವರ ಕೊಡುಗೆಯಿಂದ ನಮ್ಮ ಜಿಲ್ಲೆ ಸಹಕಾರಿ ರಂಗದ ಕಾಶಿಯಾಗಿ ಬೆಳೆದಿದೆ ಎಂದರು.

ಎಸ್.ಇ.ಝಡ್. ಬದಲು ಸಹಕಾರಿ ರಂಗವೇ ಮೇಲು:

ನಮ್ಮ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾದದ್ದೇ ಸಹಕಾರಿ ರಂಗ. ಎಸ್.ಇ.ಝಡ್. ಬರುವಾಗ ತಾನು ವಿರೋಧಿಸಿದ್ದೆ. ವಿರೋಧ ಯಾಕೆ ಎಂದು ಅನೇಕರು ಪ್ರಶ್ನಿಸಿದ್ದರು. ಒಂದು ಕಂಪೆನಿಗೆ ಕಡಿಮೆ ಎಂದರೂ 2500 ಎಕರೆ ಜಾಗ ನೀಡಬೇಕು. ಅಷ್ಟು ಜಾಗ ನೀಡಿ ನಮ್ಮೂರಿನ ಯುವಕರಲ್ಲಿ ಒಂದಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತದೆ. ಅದೇ ಜಾಗದಲ್ಲಿ ಒಂದು ಸಹಕಾರಿ ಸಂಸ್ಥೆ, ಶಾಲಾ – ಕಾಲೇಜನ್ನು ಊಹಿಸಿಕೊಳ್ಳಿ. ನಮ್ಮೂರಿನ ಅಷ್ಟು ಜನರಿಗೂ ಪ್ರಯೋಜನ ಆಗುತ್ತದೆ. ಮಾತ್ರವಲ್ಲ ನಮ್ಮ ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇದು ಸಹಕಾರಿ. ಆದ್ದರಿಂದ ಎಸ್.ಇ.ಝಡ್.ಗಳ ಬದಲು ಸಹಕಾರಿ ರಂಗವೇ ನಮ್ಮ ನಾಡಿನ, ಜಿಲ್ಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಟಾಟಾ – ಬಿರ್ಲಾ:

ಮೊದಲಿಗೆ ಸವಣೂರು ಸೀತಾರಾಮ ರೈ ಹಾಗೂ ಸುಂದರ್ ರೈ ಅವರನ್ನು ಸವಣೂರಿನ ಕೋಟಿ – ಚೆನ್ನಯರು ಎಂದು ಕರೆಯುತ್ತಿದ್ದರು. ಇದೀಗ ಇವರಿಬ್ಬರನ್ನು ಟಾಟಾ – ಬಿರ್ಲಾ ಎಂದು ಕರೆಯಬಹುದು. ಇವರಿಬ್ಬರಿಗೂ ಅಭಿನಂದನೆ. ಟಿಎ ಪೈ ಸ್ಥಾಪಿಸಿ ಸಹಕಾರ ಸಂಘ ಸಿಂಡಿಕೇಟ್ ಬ್ಯಾಂಕ್ ಆದಂತೆ, ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘ ಬೆಳೆಯಲಿ ಎಂದು ಶುಭಹಾರೈಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಕಂಪ್ಯೂಟರ್ ಉದ್ಘಾಟನೆ:

ಕಂಪ್ಯೂಟರ್ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ಶಿಸ್ತು ಹಾಗೂ ಸಮಯಪಾಲನೆಗೆ ಹೆಚ್ಚು ಒತ್ತು ನೀಡುವವರು ಸವಣೂರು ಸೀತಾರಾಮ ರೈ ಅವರು. ಕೃಷಿಯಿಂದ ಉದ್ಯಮದವರೆಗೆ, ಶಿಕ್ಷಣದಂತಹ ಸಾಮಾಜಿಕ ಚಟುವಟಿಕೆವರೆಗೆ ಅವರು ಕೈ ಹಾಕಿದ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಂಡಿದ್ದಾರೆ. ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘವೂ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಲಿ ಎಂದು ಹೆಜ್ಜೆ ಹಾಕಿದರು.

ಪ್ರಥಮ ಠೇವಣಿ ಪತ್ರ ಬಿಡುಗಡೆ:

ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಇದು ಬರೀಯ ಲಾಭಕ್ಕಾಗಿ ಮಾಡಿದ ಶಾಖೆಯಲ್ಲ. ಬಹಳಷ್ಟು ಸಾಮಾಜಿಕ ಕಾರ್ಯಗಳಿಗಾಗಿ ಇದನ್ನು ವಿನಿಯೋಗ ಮಾಡ್ತಾರೆ. ವಿದ್ಯಾರ್ಥಿವೇತನದಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ಎಷ್ಟು ಸಹಕಾರ ಪಡೆದುಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಸವಣೂರು ಸೀತಾರಾಮ ರೈ ಅವರು ಕೈ ಹಾಕಿದ ಯಾವುದೇ ಕೆಲಸವೂ ಅರ್ಧಕ್ಕೆ ನಿಂತದ್ದಿಲ್ಲ. ಬಹಳ ಶಿಸ್ತಿನಿಂದ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎಂದರು.

ಶಿಸ್ತು, ಸಮಯಪಾಲನೆ ಆದರ್ಶ:

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ ರೈ ಮಾತನಾಡಿ, ಎಷ್ಟು ಸಮಯ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ. ಬದುಕಿನಲ್ಲಿ ಏನು ಸಾಧಿಸಿದ್ದೇವೆ ಎನ್ನುವುದು ಮುಖ್ಯ. ಸವಣೂರು ಸೀತಾರಾಮ ರೈ ಅವರಿಗೆಂದೇ ಈ ಮಾತನ್ನು ಹೇಳಿದಂತಿದೆ. ಅವರ ಶಿಸ್ತು, ಸಮಯಪಾಲನೆ ನಮಗೆಲ್ಲ ಆದರ್ಶ ಎಂದರು.

ಉತ್ತಮ ಕಾರ್ಯ ಹೊರಹೊಮ್ಮಲಿ:

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಕೆ. ಮಾತನಾಡಿ, ಬಹಳ ಮುತುವರ್ಜಿಯಿಂದ ಸವಣೂರು ಸೀತಾರಾಮ ರೈ ಅವರು ಈ ಶಾಖೆಯನ್ನು ತೆರೆದಿದ್ದಾರೆ. ಇದನ್ನು ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಊರಿನ ಜನರ ಮೇಲಿದೆ. ಈ ಶಾಖೆಯಿಂದ ಉತ್ತಮ ಕಾರ್ಯ ಹೊರಹೊಮ್ಮಿ, ಉತ್ತಮ ಹೆಸರು ಗಳಿಸಲಿ ಎಂದು ಹಾರೈಸಿದರು.

ಸನ್ಮಾನ:

ಬಾಲ್ ಬ್ಯಾಡ್’ಮಿಂಟನ್’ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ, ಭಾರತ ತಂಡದ ಕ್ಯಾಪ್ಟನ್, ಆದರ್ಶ ವಿವಿದೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಜಯಲಕ್ಷ್ಮೀ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಎನ್. ಸುಂದರ್ ರೈ ಸವಣೂರು, ಕಟ್ಟಡದ ಮಾಲಕ ಗಣೇಶ್ ರೈ ಎಂ. ಮುಳಿಪಡ್ಪು ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಅಲೆಪ್ಪಾಡಿ ಪ್ರಥಮ ಠೇವಣಿ ಪತ್ರ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ಸೀತಾರಾಮ ರೈ ಸ್ವಾಗತಿಸಿ, ರಕ್ಷಾ ಡಿ.ಜೆ. ವಂದಿಸಿದರು. ಸಂಸ್ಥೆಯ ಮಹಾಪ್ರಬಂಧಕ ವಸಂತ ಜಾಲಾಡಿ ಹಾಗೂ ಪಾಂಡೇಶ್ವರ ಶಾಖೆಯ ಪ್ರಭಾರ ಪ್ರಬಂಧಕಿ ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಅಸ್ತಿತ್ವಕ್ಕೆ | ಮಾರ್ಚ್ 3ರಂದು ಸಾಮೂಹಿಕ ಧರಣಿಗೆ ನಿರ್ಧಾರ!

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ "ಬ್ರಹ್ಮರಕೂಟ್ಲು ಟೋಲ್ ಗೇಟ್…