ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿರುವ ಮರಳು ಹಾಗೂ ಕೆಂಪು ಕಲ್ಲಿನ ಅಭಾವ ಕುರಿತಾಗಿ ಜುಲೈ 14ರಂದು ಪಾದಯಾತ್ರೆ ನಡೆಸಿ, ಪ್ರತಿಭಟನೆ ನಡೆಸಲಿದ್ದೇವೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಅಭಿವೃದ್ಧಿ ವಿರೋಧಿ ನೀತಿಯಿಂದಾಗಿ ಜಿಲ್ಲೆಯಲ್ಲಿ ಕಳೆದೆರಡು ತಿಂಗಳುಗಳಿಂದ ಪ್ರಾಕೃತಿಕವಾಗಿ ಸಿಗುವ ಮರಳು ಹಾಗೂ ಕೆಂಪು ಕಲ್ಲಿನ ಅಭಾವ ಕಾರ್ಮಿಕರಿಗೆ ಶಾಪವಾಗಿ ಕಾಡುತ್ತಿದೆ. ಜನಜೀವನವೇ ಕಷ್ಟ ಎಂಬಂತಾಗಿದೆ. ಕಟ್ಟಡ ಕಾರ್ಮಿಕರು, ಕಲ್ಲು ಕೋರೆ ಕಾರ್ಮಿಕರು, ಮರಳು ತೆಗೆಯುವ ಕಾರ್ಮಿಕರು, ಸಣ್ಣ ಗುತ್ತಿಗೆದಾರರು, ಟೆಂಪೋ, ಲಾರಿ, ಜೆಸಿಬಿ ಚಾಲಕ ವರ್ಗ ಹಾಗೂ ಹಳ್ಳಿಯ ಮನೆ ನಿರ್ಮಾಣ ಮಾಡುವ ಬಡವರ್ಗ ಒಪ್ಪೊತ್ತಿನ ಊಟಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ಹಾಗಾಗಿ ನೆಲ್ಲಿಕಟ್ಟೆ ಖಾಸಾಗಿ ಬಸ್ ನಿಲ್ದಾಣದಿಂದ ಅಮರ್ ಜವಾನ್ ಸ್ಮಾರದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ, ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಇದೇ ರೀತಿ 9/11 ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆಯಾದಿಯಾಗಿ ಎಲ್ಲಾ ರೀತಿಯಲ್ಲೂ ಜನರಿಗೆ ಸಮಸ್ಯೆಯಾಗಿರುವುದರಿಂದ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪರಿಹಾರ ಮಾಡಿಕೊಡಬೇಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಅವರಿಗೆ ನೋಟಿಸ್ ನೀಡಿದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಮಾತನಾಡಿ, ಸಂತ್ರಸ್ತೆಯ ಪರವಾಗಿ ಪಕ್ಷದ ಪ್ರಮುಖರು ನಿಂತಿದ್ದಾರೆ. ಪಿ.ಜಿ. ಜಗನ್ನಿವಾಸ್ ಅವರನ್ನು ಭೇಟಿಯಾಗಿ ಖುದ್ದಾಗಿ ಮಾತುಕತೆ ನಡೆಸಲಾಗಿದೆ. ಪ್ರಾರಂಭದಲ್ಲಿ ಮದುವೆ ಮಾಡಿಸುತ್ತೇವೆ ಎಂದೇ ಹೇಳಿದ್ದರು. ಹಾಗಾಗಿ ಕೌಟುಂಭಿಕ ವಿಚಾರವನ್ನು ಹೊರ ತರುವುದು ಬೇಡ ಎಂಬ ನೆಲೆಯಲ್ಲಿ ಸುಮ್ಮನಿದ್ದೇವು. ಆದರೆ ಬಳಿಕದ ಬೆಳವಣಿಗೆಯಲ್ಲಿ ಪಕ್ಷಕ್ಕೆ ಮುಜುಗರ ತರುವ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ನೋಟಿಸ್ ನೀಡಲಾಗಿದೆ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದ ಅವರು, ರಿಜಿಸ್ಟರ್ ಪೋಸ್ಟ್ ನಲ್ಲಿ ನೋಟಿಸ್ ಕಳುಹಿಸಿದ ದಾಖಲೆಯನ್ನು ತೋರಿಸಿದರು.
ಪ್ರಮುಕರಾದ ಪ್ರಸನ್ನ ಮಾರ್ತ, ಅನಿಲ್ ತೆಂಕಿಲ, ಉಮೇಶ್ ಗೌಡ ಉಪಸ್ಥಿತರಿದ್ದರು.