ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿದ್ದರಿಂದ ಸುತ್ತಲಿನ ಸುಮಾರು 1 ಕಿ. ಮೀ. ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿರುವುದನ್ನು ವಿರೋಧಿಸಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ನಾಗರಿಕರು ಪ್ರತಿಭಟನೆ ನಡೆಸಿದ್ದು ಈ ವೇಳೆ ಜೈಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವೇದವ್ಯಾಸ್ ಕಾಮತ್, ಜೈಲಿನಲ್ಲಿ ಜಾಮರ್ ಅಳವಡಿಸಿದ್ದರಿಂದ ಸುತ್ತಮುತ್ತಲಿನ ಕಚೇರಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸರಕಾರವೂ ಮೌನ ವಹಿಸಿದೆ. ಜೈಲಿನ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಜಾಮರ್ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಪ್ರತಿಭಟನಾಕಾರರು ಮೊಬೈಲ್‌ಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದು, ಜೈಲಿಗೆ ನುಗ್ಗಲು ಯತ್ನಿಸಿದ್ದಾರೆ. ಮೊದಲೇ ತಯಾರಾಗಿದ್ದ ಪೊಲೀಸ್ ತಂಡ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.