ಗೋವಾ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಗೋವಾದ ಡೊನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಳಗ್ಗೆ 5:20ಕ್ಕೆ ಕೊನೆಯುಸಿರೆಳೆದಿದ್ದಾರೆ.
ನಾನಾ ಪಾಟೇಕರ್ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಣಿಪಾಲ್ ಆಸ್ಪತ್ರೆಯ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಅವರ ಮಾಹಿತಿ ಪ್ರಕಾರ, ವೈದ್ಯಕೀಯ ತಂಡವು ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ CPR ನೀಡಿ ಅವರನ್ನು ಉಳಿಸಲು ಪ್ರಯತ್ನಿಸಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ನಾನಾ ಪಾಟೇಕರ್ ಅವರ ನಿಧನದ ಪ್ರಕರಣವನ್ನು ಮೆಡಿಕೋ-ಲೀಗಲ್ ಕೇಸ್ (MLC) ಆಗಿ ದಾಖಲಿಸಲಾಗಿದೆ. ಸಾವಿನ ನಿಖರ ಕಾರಣ ಹಾಗೂ ಸಂದರ್ಭಗಳನ್ನು ದೃಢಪಡಿಸಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ತಮ್ಮದೇ ಆದ ಅಭಿನಯ ಶೈಲಿಯಿಂದ ಗುರುತಿಸಿಕೊಂಡಿದ್ದ ನಾನಾ ಪಾಟೇಕರ್ ಅವರು ನಟನಷ್ಟೇ ಅಲ್ಲದೆ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ‘ಕ್ರಾಂತಿವೀರ್’, ‘ಪರಿಂಧಾ’, ‘ಅಗ್ನಿಸಾಕ್ಷಿ’, ‘ವೆಲ್ಕಮ್’ ಸೇರಿದಂತೆ ಹಲವು ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. 2013ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ನಾನಾ ಪಾಟೇಕರ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
























