ಮಧುಗಿರಿ: ಸುಮಾರು 10ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್
ಕಂಪನಿಗಳಿಂದ ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಅದನ್ನು ಮರಳಿಸದೆ ಹಣದ ಸಹಿತ ದಂಪತಿ ಪರಾರಿಯಾಗಿದ್ದು, ಇದೀಗ ಕಂಪನಿಯವರು ಹಣ ಕಟ್ಟುವಂತೆ ಗ್ರಾಮಸ್ಥರಿಗೆ ನೊಟೀಸ್ ನೀಡಿದ್ದು, ನೋಟಿಸ್ ನೋಡಿ ಕಂಗಾಲು ಆಗಿದ್ದಾರೆ.
ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ್ ಮತ್ತು ರತ್ನಮ್ಮ ದಂಪತಿ ಸುಮಾರು 35 ಗ್ರಾಮಸ್ಥರ ಆಧಾರ್ ಕಾರ್ಡ್, ಇತರೆ ದಾಖಲೆ ಪಡೆದು 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 45ರಿಂದ 50 ರು.ಲಕ್ಷದವರೆಗೆ ಸಾಲ ಮಂಜೂರು ಮಾಡಿಸಿದ್ದರು. ಜನರಿಗೆ ಮಂಜೂರಾದ ಹಣ ಪಡೆದು ನಾವೇ ಸಾಲದ ಹಣ ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದೀಗ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿ ಮಾಡುವಂತೆ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿವೆ. ಫೈನಾನ್ಸ್ ಸಿಬ್ಬಂದಿ ಪ್ರತಿ ದಿನ ಮನೆಗೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಹಣವನ್ನು ದಂಪತಿ ಪಡೆದು ಪರಾರಿಯಾಗಿದ್ದಾರೆ ಎಂದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಜ.17ರಂ ಗ್ರಾಮಸ್ಥರು ದೂರು ನೀಡಿದ್ದು ಈ ವರೆಗೂ ಯಾವು- ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗ್ರಾಮ ತೊರೆದ ಮೂರು ಕುಟುಂಬಗಳು:
ಯಾವುದೇ ವ್ಯಕ್ತಿ ಬಂದರೂ ಈ ದಂಪತಿ ಸೂಚನೆ ಮೇರೆಗೆ ಹಣ ನೀಡುತ್ತಿದ್ದರು. ದಾಖಲೆ ಸರಿ ಇಲ್ಲದಿದ್ದರೆ ಇವರೇ ಆಧಾರ್, ಪ್ಯಾನ್ ಕಾರ್ಡ್‌ಗಳ ಸೃಷ್ಟಿಸಿ ಫೈನಾನ್ಸ್ ಕಂಪನಿಗಳಿಗೆ ನೀಡಿ ಹಣ ಬಿಡುಗಡೆ ಮಾಡಿಸುತ್ತಿದ್ದರು. ಹಣ ಬಂದ ತಕ್ಷಣ ನಮ್ಮಿಂದ ಹಣ ಪಡೆದು ಕಟ್ಟದೆ ಇದೀಗ ಊರು ಬಿಟ್ಟಿದ್ದಾರೆ. ಆದರೆ ನೋಟಿಸ್ ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದು ದಿಕ್ಕೂ ತೋಚದೆ ಈಗಾಗಲೇ 3 ಕುಟುಂಬಗಳು ಗ್ರಾಮ ತೊರೆದಿದ್ದು 32 ಕುಟುಂಬಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಗ್ರಾಮದ ರಂಗಮ್ಮ, ಸಾವಿತ್ರಮ್ಮ, ನರಸಮ್ಮ, ಕೋಟೆಮ್ಮ ಸಿದ್ದಗಂಗಮ್ಮ, ರತ್ನಮ್ಮ, ಎಸ್‌ರಂಗಮ್ಮ, ಕೋಮಲಮ್ಮ, ಲಕ್ಷ್ಮೀದೇವಮ್ಮ, ಮಂಜುಳಾ, ವೀರನಾಗಮ್ಮ, ಹನುಮಕ್ಕ, ಮಂಜುಳಮ್ಮ, ಮೇಘಾ, ಪುಟ್ಟ ತಾಯಪ್ಪ ಹಾಜರಿದ್ದರು.
ಈ ದಂಧೆ ಸುಮಾರು ಐದಾರು ವರ್ಷಗಳಿಂದ ನಡೆಯುತ್ತಿದ್ದು ಬಹಿರಂಗವಾಗಿಲ್ಲ ಇತ್ತೀಚೆಗೆ ನೋಟಿಸ್ ಬರಲು ಆರಂಭಗೊಂಡಾಗ ಇಲ್ಲಿನ ಜನತೆ ನನ್ನ ಗಮನಕ್ಕೆ ತಂದಿದ್ದು ಈ ಬಗ್ಗೆ ಈಗಾಗಲೇ ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಲಾಗಿದೆ. – ರವಿ ಕುಮಾರ್, ಗ್ರಾಪಂ ಸದಸ್ಯ
ದೊಡ್ಡಹೊಸಹಳ್ಳಿ
65 ವರ್ಷ ಮೇಲ್ಪಟ್ಟವರಿಗೆ ಸಾಲ ನೀಡಲ್ಲ. ಆದರೆ ಆಧಾರ್ ತಿದ್ದುಪಡಿ ಮಾಡಿಸಿ ಸಾಲ ಕೊಡಿಸಿದ್ದಾರೆ. ಮಹಿಳಾ ಸಂಘಗಳ ಸಾಲವನ್ನು ಲಪಟಾಯಿಸಿದ್ದಾರೆ. ಇದು ಹಗಲು ದರೋಡೆ. ನೊಂದವರಲ್ಲಿ ನಾನು ಒಬ್ಬಳು ನನಗೂ ಮೋಸ ಮಾಡಿದ್ದು ಈಗಾಗಲೇ 3 ಜನ ಊರು ಬಿಟ್ಟಿದ್ದಾರೆ.
-ರಾಧಿಕಾ ಜಿ.ಕೆ. ಕೃಷ್ಣಮೂರ್ತಿ, ಗ್ರಾಪಂ ಸದಸ್ಯೆ
ಪ್ರತಾಪ್ ಮತ್ತು ರತ್ನಮ್ಮ ಎಂಬುವವರು ನಮ್ಮ ಹೆಸರಲ್ಲಿ ಸಾಲ ಪಡೆದು ಊರು ಬಿಟ್ಟಿದ್ದು ಹಟ್ಟಿಯ 35 ಜನರ ಹೆಸರಲ್ಲಿ ವಿವಿಧ ಸಂಘಗಳಲ್ಲಿ ಸಾಲ ಕೊಡಿಸಿ ಹಣ ಪಡೆದು ಪರಾರಿಯಾಗಿದ್ದು ವಿಷ ಕುಡಿಯುವುದೊಂದೆ ಬಾಕಿ ಇದೆ. ನಮಗೆ ನ್ಯಾಯ ಕೊಡಿಸಿ ಎಂದು ಬೇಡುತ್ತಿದ್ದೇವೆ ಎಂದರು. -ಕೋಟಮ್ಮ, ಸ್ಥಳಿಯ ನಿವಾಸಿ ದೊಡ್ಡಹೊಸಹಳ್ಳಿ