ಪುತ್ತೂರು: ಸಂಪಾಜೆಯಲ್ಲಿ ನಿನ್ನೆ ಸಂಜೆ ನಡೆದಿದ್ದ ಕಂಟೈನರ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿ ಅಪಘಾತದಲ್ಲಿ ಮೃತಪಟ್ಟಿದ್ದ ಪತಿ ಹಾಗೂ ಪತ್ನಿಯ ಪ್ರಾರ್ಥೀವ ಶರೀರಕ್ಕೆ ಪುತ್ತೂರಿನಲ್ಲಿ ಅಂತ್ಯವಿಧಿಗಳನ್ನು ನೆರವೇರಿಸಲಾಯಿತು.
ಬುಧವಾರ ಮೃತದೇಹಗಳನ್ನು ಕೋಡಿಂಬಾಡಿಯ ಸಂಬಂಧಿಕರ ಮನೆಗೆ ತಂದು, ಅಂತ್ಯ ವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ಮಡ್ಯಲಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.
ದಂಪತಿಗಳು ಪುತ್ರನನ್ನು ಅಗಲಿದ್ದಾರೆ.
ಚೆಡಾವು ಬಳಿ ನಡೆದಿದ್ದ ಭೀಕರ ಅಪಘಾತ:
ಸಂಪಾಜೆ ಸಮೀಪದ ಕೊಯನಾಡಿನ ಚೆಡಾವು ಬಳಿ ದ್ವಿಚಕ್ರ ವಾಹನವೊಂದಕ್ಕೆ ಕಂಟೈನರ್ ಲಾರಿ ಢಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸವಾರರಿಬ್ಬರು ಮಂಗಳವಾರ ಮೃತಪಟ್ಟಿದ್ದರು.
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಹಾಗೂ ಸಿದ್ದಾಪುರದಿಂದ ಸುಳ್ಯ ಮೂಲಕ ಪುತ್ತೂರಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಸಂಪಾಜೆ ಕೊಯನಾಡಿನ ಚೆಡಾವು ಬಳಿ ಮುಖಾಮುಖಿ ಢಿಕ್ಕಿಯಾಗಿತ್ತು.
ಅಪಘಾತದ ಭೀಕರತೆಗೆ ದ್ವಿಚಕ್ರ ವಾಹನ ಸವಾರ ಮೂಲತ: ಪುತ್ತೂರಿನ, ಕೊಡಗು ಜಿಲ್ಲೆಯ ಸಿದ್ಧಾಪುರದ ನೆಲ್ಲಿಹುದಿಕೇರಿಯಲ್ಲಿ ನೆಲೆಸಿದ್ದ ಎಂ. ಚಿದಾನಂದ ಆಚಾರ್ಯ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಹ ಸವಾರೆ ಚಿದಾನಂದ ಆಚಾರ್ಯ ಅವರ ಪತ್ನಿ ನಳಿನ (39) ಗಂಭೀರ ಗಾಯಗೊಂಡಿದ್ದರು. ಅಂಬ್ಯುಲೆನ್ಸ್ ಮೂಲಕ ಸ್ಥಳೀಯರು ಸೇರಿ ಸುಳ್ಯದ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ.
ಚಿದಾನಂದ ಆಚಾರ್ಯ ದಂಪತಿ ಚಿನ್ನದ ಕೆಲಸ ಮಾಡಿಕೊಂಡು ಕೊಡಗಿನ ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ನೆಲೆಸಿದ್ದರು. ಜೊತೆಗೆ ಮಗ ಕೂಡ ಒಟ್ಟಿಗೆ ನೆಲೆಸಿದ್ದರು. ಮಂಗಳವಾರ ಪುತ್ತೂರಿನಲ್ಲಿ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ತನ್ನ ಮಗನನ್ನು ಸಿದ್ದಾಪುರದಿಂದ ಬಸ್ಸಿನಲ್ಲಿ ಕಳಿಸಿ ದಂಪತಿ ತಮ್ಮ ಸ್ಕೂಟಿಯಲ್ಲಿ ಪ್ರಯಾಣಿಸಿದ್ದರು. ಆದರೆ ಸಂಪಾಜೆಯ ಚೆಡಾವು ಎಂಬಲ್ಲಿಗೆ ತಲುಪಿದಾಗ ಕಂಟೈನರ್ ಲಾರಿ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟಿಗೆ ಢಿಕ್ಕಿ ಹೊಡೆದಿರುವುದಾಗಿ ವರದಿಯಾಗಿತ್ತು.