ಪುತ್ತೂರು: ಮುಕ್ವೆಯಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 06ರಂದು ರಾತ್ರಿ ನರಿಮೊಗರು ನಿವಾಸಿ ಮಹಮ್ಮದ್ ಸಿರಾಜುದ್ದೀನ್ (36) ಮುಕ್ವೆ ಮಸೀದಿಯ ಬಳಿಯಿದ್ದಾಗ ಆರೊಪಿ ನರಿಮೊಗರು ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನು ದೂರುದಾರರ ಬಳಿ ಬಂದು, ಅದೇ ದಿನ ಸಂಜೆ ನಡೆದಿದ್ದ ಗಲಾಟೆಯೊಂದಕ್ಕೆ ಸಂಬಂಧಿಸಿದಂತೆ, ತಕರಾರು ತೆಗೆದು ಅಲ್ಲಿಂದ ತೆರಳಿರುತ್ತಾನೆ. ಆ ಬಳಿಕ ದೂರುದಾರರು ಮನೆಗೆ ಹೋಗುವ ಸಂದರ್ಭ ಮುಕ್ವೆ ಎಂಬಲ್ಲಿ ತಲುಪಿದಾಗ, ಆರೋಪಿಯು ಸಾರ್ವಜನಿಕವಾಗಿ ಭಯಹುಟ್ಟುವಂತೆ, ಕೈಯಲ್ಲಿ ತಲವಾರು ಹಿಡಿದುಕೊಂಡು ಪ್ರದರ್ಶಿಸುತ್ತಿರುವುದು ಕಂಡುಬಂದಿರುತ್ತದೆ ಎಂದು ದೂರು ನೀಡಿದ್ದಾರೆ.
ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ ಕ್ರ: : 29/2026, ಕಲಂ: 109,351 BNS 2023 ಮತ್ತು 3,25,27 ಶಸ್ತ್ರಾಸ್ತ್ರ ಕಾಯ್ದೆ 1959ಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಆರೋಪಿ ಅಬ್ದುಲ್ ರಹಿಮಾನ್ ಗೆ ಘಟನಾ ಸ್ಥಳದಲ್ಲಿದ್ದ ಸೇರಿದ್ದ ಸ್ಥಳೀಯರು ಹಲ್ಲೆ ನಡೆಸಿದ್ದು, ಇದರಿಂದಾಗಿ ಆರೋಪಿಯು ತೀವ್ರತರದ ಗಾಯಗೊಂಡು ಪ್ರಸ್ತುತ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
ಘಟನೆ ಬಗ್ಗೆ ಅಬ್ದುಲ್ ರಹಿಮಾನ್ ಅವರು, ಮುಕ್ವೆ ಜಂಕ್ಷನ್ ಬಳಿ ನಿಂತಿದ್ದಾಗ, ಹಿಂದಿನಿಂದ ಅಪರಿಚಿತ ವ್ಯಕ್ತಿಗಳು ತನಗೆ ಪ್ರಜ್ಞೆ ತಪ್ಪುವಂತೆ ಹಲ್ಲೆ ನಡೆಸಿರುತ್ತಾರೆ ಎಂದು ಪ್ರತಿದೂರು ನೀಡಿದ್ದು, ಪುತ್ತೂರು ನಗರ ಪೊಲೀಸ್ ಠಾಣಾ ಅ ಕ್ರ: 30/2026, ಕಲಂ: 118(1),126(2) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದೆ.






















